ಬೊಮ್ಮನಹಳ್ಳಿ: ಕನಕಪುರ ರಸ್ತೆ ತಲಘಟ್ಟಪುರದ ಬಳಿ ಇರುವ ನ್ಯಾಯಾಂಗ ಬಡಾವಣೆಯ ರಸ್ತೆಗಳು ಗುಂಡಿಮಯವಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.
ಬಡಾವಣೆಯಲ್ಲಿನ 13 ಮುಖ್ಯ ರಸ್ತೆಗಳೂ ಗುಂಡಿಮಯವಾಗಿವೆ. ಮಳೆ ನೀರು ನಿಂತು ರಸ್ತೆಗಳು ಹೊಳೆಯಂತಾಗಿವೆ. ಈ ರಸ್ತೆಗಳು, ದೊಡ್ಡ ಅಪಾರ್ಟ್‌ಮೆಂಟ್ ಸಮುಚ್ಛಯ ಮತ್ತು ಹಲವು ಶಾಲೆಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಗುಂಡಿಗಳಿಂದಾಗಿ ಶಾಲಾ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.
ʼಜಲಮಂಡಳಿ, ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನವರು ವಿವಿಧ ಕಾಮಗಾರಿಗಳಿಗಾಗಿ ರಸ್ತೆ ಅಗೆದು, ದುರಸ್ತಿಗೊಳಿಸದೇ ಹೋಗಿದ್ದಾರೆ. ಈ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ, ಜತೆಗೆ ಇಲ್ಲಿನ ಶಾಸಕರಿಗೂ ಮನವಿ ಮಾಡಲಾಗಿದೆ. ಹೀಗಿದ್ದರೂ ಯಾರೂ ಇತ್ತ ತಿರುಗಿ ನೋಡಿಲ್ಲʼ ಎಂದು ಇಲ್ಲಿನ ನಿವಾಸಿ ಎಚ್.ಎನ್.ಹರಿ ದೂರಿದ್ದಾರೆ.
ʼಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಧೀಶರು ಇಲ್ಲಿ ವಾಸವಿದ್ದಾರೆ. ತಾತ್ಕಾಲಿಕವಾಗಿಯಾದರೂ ಗುಂಡಿಗಳನ್ನು ಮುಚ್ಚಿ ಎಂದು ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲʼ ಎಂದು ನಿವಾಸಿಗಳ ಸಂಘದ ಮುಖ್ಯಸ್ಥ ಮೂರ್ತಿ ತಿಳಿಸಿದರು.
ಕಾರ್ಯಪಾಲಕ ಎಂಜಿನಿಯರ್ ಚಾಮರಾಜ್ ಪ್ರತಿಕ್ರಿಯಿಸಿ, ‘ನಿವಾಸಿಗಳ ದೂರಿನ ಮೇರೆಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ರಸ್ತೆ ದುರಸ್ತಿಗಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಮುಖ್ಯ ಎಂಜಿನಿಯರ್ ಅವರನ್ನು ಕೋರಲಾಗಿದೆ. ಅನುದಾನ ಬಂದ ಕೂಡಲೇ ಆದ್ಯತೆ ಮೇಲೆ ದುರಸ್ತಿ ಕಾರ್ಯ ಕೈಗೊಳ್ಳುತ್ತೇವೆʼ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.