ADVERTISEMENT

ಟಿಕಿ ಶರ್ಮಿಳಾ ಅನುಮಾನಸ್ಪ‍ದ ಸಾವು: ಬಂಧಿತ ವಿದ್ಯಾರ್ಥಿಯ ವಿಚಾರಣೆ ತೀವ್ರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 19:07 IST
Last Updated 12 ಜನವರಿ 2026, 19:07 IST
ಶರ್ಮಿಳಾ 
ಶರ್ಮಿಳಾ    

ಬೆಂಗಳೂರು: ಸಾಫ್ಟ್‌ವೇರ್‌ ಎಂಜಿನಿಯರ್‌ ಶರ್ಮಿಳಾ  ಅವರ ಅನುಮಾನಸ್ಪ‍ದ ಸಾವಿನ ಪ್ರಕರಣ ಸಂಬಂಧ ವಿದ್ಯಾರ್ಥಿಯನ್ನು ಬಂಧಿಸಿರುವ ರಾಮಮೂರ್ತಿನಗರ ಠಾಣೆ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣ ಸಂಬಂಧ ನೆರೆ ಮನೆಯ ನಿವಾಸಿ ಕರ್ನಲ್ ಕುರೈನನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣದ ಜೊತೆಗೆ ಲೈಂಗಿಕ ದೌರ್ಜನ್ಯ ಪ್ರಕರಣವನ್ನೂ ದಾಖಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಮತ್ತು ಮೃತಳ ಮೊಬೈಲ್‌ಗಳನ್ನು ವಶಪಡಿಸಿಕೊಂಡು, ಪರಿಶೀಲನೆ ನಡೆಸುತ್ತಿದ್ದಾರೆ.

‘ಶರ್ಮಿಳಾ ಎಷ್ಟು ವರ್ಷದಿಂದ ಪರಿಚಯ? ಮೊಬೈಲ್ ಸಂದೇಶಗಳ ವಿನಿಮಯ, ಕೃತ್ಯ ನಡೆದ ವೇಳೆ ಆರೋಪಿ ಮದ್ಯ ಸೇವಿಸಿರುವ ವಿಚಾರ ಸೇರಿ ಇತರೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅತ್ಯಾಚಾರ ನಡೆದಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿದ್ಧೇವೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಕೃತ್ಯದ ಬಳಿಕ ಆರೋಪಿ ಕೆಲವು ಮೆಸೇಜ್‌ಗಳನ್ನು ಅಳಿಸಿ ಹಾಕಿರುವ ಸಾಧ್ಯತೆ ಇದೆ. ಹಾಗಾಗಿ ದತ್ತಾಂಶ ಮರು ಸಂಗ್ರಹಿಸಲು ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗುವುದು’ ಎಂದು ತಿಳಿಸಿದರು.  

ಮಂಗಳೂರಿನ ಕಾವೂರಿನ ಶರ್ಮಿಳಾ ಅವರು ಒಂದೂವರೆ ವರ್ಷದಿಂದ ಸುಬ್ರಹ್ಮಣ್ಯ ಲೇಔಟ್‌ನ ವಸತಿ ಸಮುಚ್ಛಯದ ಫ್ಲ್ಯಾಟ್‌ನಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದರು. ರಜೆ ಇದ್ದ ಕಾರಣ ಸ್ನೇಹಿತೆ ಊರಿಗೆ ತೆರಳಿದ್ದರಿಂದ ಶರ್ಮಿಳಾ ಒಬ್ಬರೇ ಇದ್ದರು.

ಆರೋಪಿ ಕರ್ನಲ್ ಕುರೈ ಜನವರಿ 3ರ ರಾತ್ರಿ 10.30ರ ಸುಮಾರಿಗೆ ಶರ್ಮಿಳಾ ಅವರ ಫ್ಲ್ಯಾಟ್ ಪ್ರವೇಶಿಸಿ, ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸಿದ್ದ. ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ, ಆಕೆಯ ಬಾಯಿ ಮತ್ತು ಮೂಗನ್ನು ಗಟ್ಟಿಯಾಗಿ ಮುಚ್ಚಿದ್ದ. ಇದರಿಂದ ಶರ್ಮಿಳಾ ಮೂಗಿನಿಂದ ರಕ್ತ ಬಂದು, ಆಕೆಯ ಬಟ್ಟೆ ಮೇಲೆ ಚೆಲ್ಲಿತ್ತು. ಸಾಕ್ಷ್ಯ ನಾಶ ಮಾಡಲು ಬಟ್ಟೆಗೆ ಬೆಂಕಿ ಹಚ್ಚಿ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ಮರಣೋತ್ತರ ಪರೀಕ್ಷೆ ವೇಳೆ ದೇಹದ ಮೇಲಿನ ಗಾಯ, ಹಲ್ಲೆ ಮಾಡಿರುವ ಗುರುತುಗಳು ಪತ್ತೆಯಾಗಿದ್ದವು. ಬೆಂಕಿಯಿಂದ ಯಾವುದೇ ತೊಂದರೆಯಾಗಿಲ್ಲ. ಹಲ್ಲೆ ನಡೆಸಿದಾಗ ಪ್ರಜ್ಞೆ ತಪ್ಪಿದ್ದ ಟೆಕಿ ಜೀವಂತವಾಗಿದ್ದರು ಎಂದು ವೈದ್ಯರು ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.

‘ಶರ್ಮಿಳಾ ಅವರ ಮೊಬೈಲ್ ಅನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಆರೋಪಿ, ಕೃತ್ಯ ನಡೆದ ಮೂರು ದಿನದ ಬಳಿಕ ಆ ಮೊಬೈಲ್‌ಗೆ ತನ್ನ ಸಿಮ್ ಹಾಕಿ ಆನ್ ಮಾಡಿದ್ದ. ಮೃತಳ ಫೋನ್ ಟ್ರ್ಯಾಕ್ ಮಾಡುತ್ತಿದ್ದ ಪೊಲೀಸರು, ಲೋಕೇಷನ್ ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದು ಗೊತ್ತಾಯಿತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.