ADVERTISEMENT

ತಂತ್ರಜ್ಞಾನದ ಅಧ್ಯಯನ ನಡೆಯಲಿ: ಸಚಿವೆ ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 23:16 IST
Last Updated 21 ಡಿಸೆಂಬರ್ 2025, 23:16 IST
   

ಬೆಂಗಳೂರು: ‘ಎಫ್‌ಕೆಸಿಸಿಐನ ಮೂರನೇ ಸಮಾವೇಶದಲ್ಲಿ ಕೈಗಾರಿಕಾ ಮಳಿಗೆಗಳ ಪ್ರದರ್ಶನದ ಜೊತೆಗೆ, ಅಂತರರಾಷ್ಟ್ರೀಯ ತಂತ್ರಜ್ಞಾನ ಕುರಿತು ಅಧ್ಯಯನ ನಡೆಸುವಂತಾಗಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಹಾಗೂ ಪೀಣ್ಯ ಕೈಗಾರಿಕಾ ಸಂಘ ಶನಿವಾರ ಜಂಟಿಯಾಗಿ ಆಯೋಜಿಸಿದ್ದ ಗ್ಲೋಬಲ್ ಎಂಎಸ್‌ಎಂಇ ಸಮಾವೇಶ 2026ರ ಲಾಂಛನ ಅನಾವರಣಗೊಳಿಸಿ ಮಾತನಾಡಿದರು.

ಎಫ್‌ಕೆಸಿಸಿಐ ಎರಡು ವರ್ಷಗಳಿಂದ ನಡೆಸಿದ ಸಮಾವೇಶ‌ ಯಶಸ್ವಿಯಾಗಿದ್ದು, ಈಗ ಮೂರನೇ ಆವೃತ್ತಿಯ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸಮಾವೇಶವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಸಂತಸದ ವಿಷಯವಾಗಿದೆ. ಸಮಾವೇಶದಲ್ಲಿ ರಫ್ತು ಬಗ್ಗೆ ಕೇಂದ್ರೀಕರಿಸಿ ಹೆಚ್ಚಿನ ಅಧ್ಯಯನ ನಡೆಸಿ, ಕೇಂದ್ರಕ್ಕೆ ವರದಿ ನೀಡಬೇಕು. ಆಗ ಮಾತ್ರ ಎಂಎಸ್‌ಎಂಇಗಳ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ADVERTISEMENT

ಸಮಾವೇಶಕ್ಕೂ ಮುನ್ನ ‌ಎಲ್ಲ ಬ್ಯಾಂಕ್‌ಗಳ ಜೊತೆ ಸಭೆ ನಡೆಸಿ, ಸಮಸ್ಯೆಗಳು ಹಾಗೂ ತೊಂದರೆಗಳ ಬಗ್ಗೆ ಚರ್ಚಿಸಲಾಗುವುದು. ರಾಷ್ಟ್ರೀಕೃತ ಬ್ಯಾಂಕ್‌, ಹಣಕಾಸು ಇಲಾಖೆ ಅಧಿಕಾರಿಗಳು ಹಾಗೂ ಎಫ್‌ಕೆಸಿಸಿಐ ಸದಸ್ಯರೊಡನೆ ಜಂಟಿ ಸಭೆ ನಡೆಸಲಾಗುವುದು. ಕರ್ನಾಟಕದ ಸಣ್ಣ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಯಾವ ಸ್ಥಾನದಲ್ಲಿವೆ ಎಂಬುದು ಸಮಾವೇಶದ ಮೂಲಕ ತಿಳಿಯುವಂತಾಗುತ್ತದೆ. ಕೈಜೋಡಿಸುವಂತೆ ರಾಜ್ಯ ಸರ್ಕಾರದ ಜೊತೆಗೂ ಚರ್ಚಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ.ದಾನಪ್ಪ, ಹಿರಿಯ ಉಪಾಧ್ಯಕ್ಷ ಟಿ.ಸಾಯಿರಾಂ ಪ್ರಸಾದ್, ಉಪಾಧ್ಯಕ್ಷ ಬಿ.ಪಿ.ಶಶಿಧರ್, ನಿಕಟಪೂರ್ವ ಅಧ್ಯಕ್ಷ ಉಪಾಧ್ಯಕ್ಷ ಎಂ.ಜಿ.ಬಾಲಕೃಷ್ಣ, ಗ್ಲೋಬಲ್ ಎಂಎಸ್‌ಎಂಇ ಸಮಾವೇಶದ ಅಧ್ಯಕ್ಷ ಬಿ.ಸಿ. ತಿಪ್ಪೇಶಪ್ಪ, ಸಲಹೆಗಾರ ಎಂ.ಸಿ.ದಿನೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.