ತೇಜಸ್ವಿ ಸೂರ್ಯ
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ 'ಏರೊ ಇಂಡಿಯಾ 2025' ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದೇಶೀಯವಾಗಿ ನಿರ್ಮಿತ ಎಚ್‌ಟಿಟಿ-40 ಬೇಸಿಕ್ ತರಬೇತಿ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿರ್ಮಿಸಿರುವ ಈ ತರಬೇತಿ ವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಬಳಿಕ ಮಾಧ್ಯಮ ಮಿತ್ರರಿಗೆ ತಮ್ಮ ಅನುಭವ ಹಂಚಿಕೊಂಡಿರುವ ತೇಜಸ್ವಿ ಸೂರ್ಯ, 'ಇಂದು ಎಚ್‌ಎಎಲ್ ನಿರ್ಮಿಸಿರುವ ಎಚ್‌ಟಿಟಿ-40 ವಿಮಾನದಲ್ಲಿ ಹಾರಾಡಲು ಅವಕಾಶ ಸಿಕ್ಕಿದೆ. ಎಚ್‌ಎಎಲ್ ಭಾರತದ ಹೆಮ್ಮೆ. ನಮ್ಮ ಬೆಂಗಳೂರಿನ ಹೆಮ್ಮೆ' ಎಂದು ಹೇಳಿದ್ದಾರೆ.
'2012ರಲ್ಲಿ ಯುಪಿಎ ಸರ್ಕಾರದ ಯೋಜನೆಯಿಂದಾಗಿ ದೇಶೀಯ ವಿಮಾನ ತಯಾರಿಕಾ ಯೋಜನೆ ಭಾರಿ ಹಿನ್ನಡೆ ಅನುಭವಿಸಿತ್ತು. ಆದರೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಎಚ್‌ಎಎಲ್‌ಗೆ ಉತ್ತೇಜನ ಲಭಿಸಿದೆ' ಎಂದು ಅವರು ಹೇಳಿದ್ದಾರೆ.
2021ರ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ತೇಜಸ್ವಿ ಸೂರ್ಯ ಅವರು ತೇಜಸ್ ಲಘು ಯುದ್ಧ ವಿಮಾನದಲ್ಲಿ (ಎಲ್‌ಸಿಎ) 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.