ಬೆಂಗಳೂರು: ಎಚ್‌ಎಎಲ್ ಫ್ಯಾಮಿಲೀಸ್ ವೆಲ್ಫೇರ್ ಅಸೋಸಿಯೇಷನ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ತೇಜಸ್ವಿ’ ಪ್ರಥಮ ರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ನಾರಿಯರ ಶಕ್ತಿ ಅನಾವರಣವಾಯಿತು.
‘ಮನೆ ಹಾಗೂ ಕೆಲಸದ ಸ್ಥಳದಲ್ಲಿ ಪ್ರಕಾಶಿಸುವ ಮಹಿಳೆಯರು’ ಎಂಬ ಶೀರ್ಷಿಕೆಯಡಿ ಈ ಸಮ್ಮೇಳನ ನಡೆಯಿತು. ವೃತ್ತಿಪರ ವಲಯಗಳಲ್ಲಿ ಮಹಿಳೆಯ ಬಹುಮುಖ ಪಾತ್ರಗಳ ಬಗ್ಗೆ ತಿಳಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ವಿಭಾಗದ ಜಂಟಿ ಕಾರ್ಯದರ್ಶಿ ಮನೀಷಾ ಚಂದ್ರ, ದೇಶದ ಪ್ರಗತಿಯಲ್ಲಿ ಎಚ್‌ಎಎಲ್‌ನ ಪಾತ್ರವನ್ನು ಶ್ಲಾಘಿಸಿದರು. ಮನೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ನಿರ್ವಹಿಸುತ್ತಿರುವ ವಿವಿಧ ಪಾತ್ರಗಳ ಬಗ್ಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಎಚ್‌ಎಎಲ್ ಫ್ಯಾಮಿಲೀಸ್ ವೆಲ್ಫೇರ್ ಅಸೋಸಿಯೇಷನ್‌ನ 50 ವರ್ಷಗಳ ಸೇವೆಯ ಸ್ಮರಣಾರ್ಥ ವಿಶೇಷ ಸುವರ್ಣ ಮಹೋತ್ಸವ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ಅಸೋಸಿಯೇಷನ್‌ನ ಮುಖ್ಯ ಪೋಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶುಭಾ ಸುನಿಲ್ ಉಪಸ್ಥಿತರಿದ್ದರು.
ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ, ಅಮೃತ ವಿಶ್ವಪೀಠಂನ ಡೀನ್ ಭವಾನಿ ರಾವ್ ಮತ್ತು ‘ಗುಪ್ತಾ ನಾಯರ್ ಆ್ಯಂಡ್ ಕೋ ಕಂಪನಿ’ಯ ಪಾಲುದಾರೆ ಸತ್ಯಭಾಮಾ ಗುಪ್ತಾ ಅವರು ತಮ್ಮ ವೈಯಕ್ತಿಕ ಅನುಭವಗಳು ಹಾಗೂ ವೃತ್ತಿಪರ ಜೀವನಯಾನದ ಹಾದಿಯನ್ನು ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.