ADVERTISEMENT

ಸ್ನೇಹಿತೆಗೆ ಬ್ಲ್ಯಾಕ್‌ಮೇಲ್‌: ₹2 ಕೋಟಿಗೆ ಬೇಡಿಕೆಯಿಟ್ಟ ಕಿರುತೆರೆ ನಟಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 15:16 IST
Last Updated 25 ಅಕ್ಟೋಬರ್ 2025, 15:16 IST
ಆಶಾ ಜೋಯಿಸ್ 
ಆಶಾ ಜೋಯಿಸ್    

ಬೆಂಗಳೂರು: ಸ್ನೇಹಿತೆಯ ವಾಯ್ಸ್‌ ರೆಕಾರ್ಡ್‌, ವಿಡಿಯೊ ಹಾಗೂ ಫೋಟೊ ಸೇರಿದಂತೆ ಮೊಬೈಲ್‌ನಲ್ಲಿದ್ದ ದತ್ತಾಂಶವನ್ನು ಕಳವು ಮಾಡಿ ಪರಿಚಿತರು, ಕುಟುಂಬಸ್ಥರಿಗೆ ಕಳುಹಿಸಿದ ಆರೋಪದ ಅಡಿ ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ತಿಲಕ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯನಗರದ ಪಾರ್ವತಿ (61) ಎಂಬುವವರು ನೀಡಿದ ದೂರಿನ ಮೇರೆಗೆ ಆಶಾ ಜೋಯಿಸ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

‘ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಕಂಪನಿ ಮಾಲೀಕರ ಜೊತೆಗೆ ಪ್ರೇಮಾಂಕುರವಾಗಿತ್ತು. ಮದುವೆಯಾಗಿ ಜೀವನ ನಡೆಸಿಕೊಂಡಿದ್ದೆವು. ಮೂರು ವರ್ಷಗಳ ಹಿಂದೆ ನಮ್ಮ ಮನೆಯ ಎದುರಿನ ಮನೆಗೆ ಬಾಡಿಗೆಗೆ ಬಂದ ಆಶಾ ಜೋಯಿಸ್ ಅವರು, ‘ನಾನು ಶೃಂಗೇರಿ ಮಠದ ಜೋಯಿಸ್ ಕುಟುಂಬಕ್ಕೆ ಸೇರಿದ್ದು, ರಾಮ ಜೋಯಿಸ್ ಸಹೋದರನ ಪುತ್ರಿ. ಕಿರುತೆರೆಯ ನಟಿ’ ಎಂಬುದಾಗಿ ಪರಿಚಯ ಮಾಡಿಕೊಂಡಿದ್ದರು’ ಎಂದು ಪಾರ್ವತಿ ದೂರಿನಲ್ಲಿ ತಿಳಿಸಿದ್ದಾರೆ.   

ADVERTISEMENT

‘ಆಶಾ ಅವರು ನಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರ ನಡುವಿನ ಸಂಬಂಧದ ವಿಷಯವನ್ನು ತಿಳಿದುಕೊಂಡಿದ್ದರು. ಕಂಪನಿಯ ಮಾಲೀಕರಿಂದ ಹಣ ವಸೂಲಿ ಮಾಡುವಂತೆ ಅವರು ಪ್ರೇರೇಪಿಸುತ್ತಿದ್ದರು. ಅದಕ್ಕೆ ನಾನು ಒಪ್ಪಿರುವುದಿಲ್ಲ’ ಎಂದು ಪಾರ್ವತಿ ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಈ ನಡುವೆ ಆಶಾ ಅವರು ಪಾರ್ವತಿ ಅವರಿಂದ ₹50 ಸಾವಿರ ಸಾಲ ಪಡೆದಿದ್ದರು. ಸ್ವಲ್ಪ ಹಣ ವಾಪಸ್‌ ಮಾಡಿ ನಂಬಿಕೆ ಗಳಿಸಿದ್ದರು. ಕೆಲವು ದಿನ ಪಾರ್ವತಿ ಮನೆಯಲ್ಲಿ ಆಶ್ರಯ ಪಡೆದಿದ್ದ ಆಶಾ ಅವರು, ಪಾರ್ವತಿ ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರಿಂದ ₹2 ಕೋಟಿ ಹಣಕ್ಕಾಗಿ ಬೇಡಿಕೆ ಇಡುವಂತೆ ಒತ್ತಾಯ ಮಾಡಿದ್ದರು. ಆದರೆ, ಪಾರ್ವತಿ ಅವರು ಒಪ್ಪಿರಲಿಲ್ಲ. ಕೆಲವು ದಿನ ಕಳೆದ ಬಳಿಕ ಆಶಾ ಅವರು ದೂರುದಾರರ ಗಮನಕ್ಕೆ ಬಾರದಂತೆ ಜೂನ್‌ 17ರಂದು ಮೊಬೈಲ್‌ನಲ್ಲಿದ್ದ ಫೋಟೊ, ವಿಡಿಯೊ ಹಾಗೂ ವಾಯ್ಸ್ ರೆಕಾರ್ಡ್‌ಗಳನ್ನು ಕದ್ದು, ಪರಿಚಿತರು, ಸ್ನೇಹಿತರಿಗೆ ರವಾನೆ ಮಾಡಿದ್ದರು’ ಎಂಬ ಆರೋಪವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.