ADVERTISEMENT

ಸಾಲು–ಸಾಲು ಹಬ್ಬ: ಕೋವಿಡ್ ಭಯದಿಂದ ಬೆಂಗಳೂರಿನಲ್ಲಿ ದೇವಸ್ಥಾನಗಳು ಮುಚ್ಚಲಿವೆಯಾ?

ಸಾಲು ಸಾಲು ಹಬ್ಬಗಳಿಂದ ಕೋವಿಡ್‌ ಹೆಚ್ಚಳ ಸಾಧ್ಯತೆ– ಜನಜಂಗುಳಿ ಮೇಲೆ ಬಿಬಿಎಂಪಿ ನಿಗಾ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 10:26 IST
Last Updated 11 ಆಗಸ್ಟ್ 2021, 10:26 IST
ಬಸವನಗುಡಿ ಬುಲ್ ಟೆಂಪಲ್
ಬಸವನಗುಡಿ ಬುಲ್ ಟೆಂಪಲ್   

ಬೆಂಗಳೂರು: ವರಮಹಾಲಕ್ಷ್ಮೀ ವ್ರತ, ಗೌರಿ ಗಣೇಶ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿವೆ. ಈ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗಿ ಕೋವಿಡ್‌ ಹರಡಬಹುದು ಎಂಬ ಆತಂಕ ಬಿಬಿಎಂಪಿಯನ್ನು ಕಾಡುತ್ತಿದೆ. ನಗರದಲ್ಲಿ ಕೋವಿಡ್‌ ನಿಯಂತ್ರಣದಲ್ಲಿ ಇರುವುದರಿಂದ ಸದ್ಯಕ್ಕೆ ಇವುಗಳನ್ನು ಮುಚ್ಚುವ ನಿರ್ಧಾರವನ್ನು ಪಾಲಿಕೆ ಕೈಗೊಂಡಿಲ್ಲ. ಆದರೆ ಕಣ್ಗಾವಲು ಹೆಚ್ಚಿಸಲು ಮುಂದಾಗಿದೆ.

‘ಮೂರನೇ ಅಲೆ ಬರುತ್ತದೆ ಎಂದು ಕೆಲವು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ, ದೇವಸ್ಥಾನಗಳನ್ನು ಹಾಗೂ ಮಾರುಕಟ್ಟೆಗಳನ್ನು ಮುಚ್ಚುವ ತೀರ್ಮಾನವನ್ನು ಕೈಗೊಂಡಿಲ್ಲ. ದೇವಸ್ಥಾನ ಹಾಗೂ ಮಾರುಕಟ್ಟೆಗಳಲ್ಲಿ ಜನಜಂಗುಳಿ ಉಂಟಾಗುವುದನ್ನು ಜನರೇ ತಡೆಯಬೇಕು. ದೇವಸ್ಥಾನಕ್ಕೆ ಹಾಗೂ ಮಾರುಕಟ್ಟೆಗೆ ಭೇಟಿ ನೀಡುವುದನ್ನು ಆದಷ್ಟು ತಪ್ಪಿಸುವ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ತಿಳಿಸಿದರು.

‘ದೇವಸ್ಥಾನ ಹಾಗೂ ಮಾರುಕಟ್ಟೆಗಳಲ್ಲಿ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕುರಿತು ವಿಸ್ತೃತ ಆದೇಶ ಹೊರಡಿಸಿದ್ದೇವೆ. ಅವುಗಳ ಜಾರಿಗೆ ಮಾರ್ಷಲ್‌ಗಳು, ಗೃಹರಕ್ಷಕ ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡಗಳನ್ನು ರಚಿಸಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಕೋವಿಡ್‌ ಪರೀಕ್ಷೆಯ ವರದಿ ಕೈಸೇರುವುದು ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಪ್ರತಿಯೊಂದು ಪ್ರಯೋಗಾಲಯವೂ ಕೋವಿಡ್‌ ಪರೀಕ್ಷೆಯ ಫಲಿತಾಂಶವನ್ನು ಚಾಚೂತಪ್ಪದೇ ಬಿಬಿಎಂಪಿಗೆ ಒದಗಿಸುವಂತೆ ಆದೇಶ ಮಾಡಿದ್ದೇವೆ. ಯಾವುದಾದರೂ ನಿರ್ದಿಷ್ಟ ಪ್ರಕರಣದಲ್ಲಿ ಫಲಿತಾಂಶದ ವರದಿ ನೀಡುವಾಗ ವಿಳಂಬವಾಗಿದ್ದರೆ ಗಮನಕ್ಕೆ ತರಬಹುದು. ಈ ಬಗ್ಗೆ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ’ ಎಂದರು.

ಕಟ್ಟಡ ನಿರ್ಮಿಸುವವರಿಂದ ನೆಲ ಬಾಡಿಗೆ, ಪರವಾನಗಿ ಶುಲ್ಕ, ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ, ಪರಿಶೀಲನಾ ಶುಲ್ಕ ಮತ್ತು ಭದ್ರತಾ ಠೇವಣಿಗಳನ್ನು ಪಡೆಯುವ ಅಧಿಕಾರ ಬಿಬಿಎಂಪಿಗೆ ಇಲ್ಲ ಎಂದು ಈ ಎಲ್ಲ ಶುಲ್ಕಗಳನ್ನೂ ರದ್ದುಮಾಡಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಯಾವ ಸನ್ನಿವೇಶದಲ್ಲಿ ಹೈಕೋರ್ಟ್‌ ಈ ರೀತಿ ಆದೇಶ ಮಾಡಿದೆಯೋ ತಿಳಿಯದು. ಈ ಆದೇಶದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

----

‘ಸ್ವಾತಂತ್ರ್ಯ ದಿನಾಚರಣೆ– ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ’

‘ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಯವರು ಕೂಡ ಈ ಬಗ್ಗೆ ಪರಾಮರ್ಶಿಸಿ ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಆ ಪ್ರಕಾರ ರಾಜಧಾನಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಸೀಮಿತ ಸಂಖ್ಯೆಯ ಜನರನ್ನು ಮಾತ್ರ ಆಹ್ವಾನಿಸಲಿದ್ದೇವೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ’ ಎಂದು ಗೌರವ್ ಗುಪ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.