ADVERTISEMENT

ಸರ್ಕಾರಿ ಶಾಲೆಗಳಲ್ಲಿ ಸೌರವಿದ್ಯುತ್‌ ಸಂಭ್ರಮ

ಎಚ್‌ಎಎಲ್‌ನ ಸಿಎಸ್‌ಆರ್‌ ನಿಧಿಯಲ್ಲಿ ಬೆಸ್ಕಾಂ – ಟೆರಿಯಿಂದ ಅನುಷ್ಠಾನ

ಗುರು ಪಿ.ಎಸ್‌
Published 28 ಸೆಪ್ಟೆಂಬರ್ 2019, 20:14 IST
Last Updated 28 ಸೆಪ್ಟೆಂಬರ್ 2019, 20:14 IST
ಚಿಕ್ಕಬಿದರುಕಲ್ಲು ಸರ್ಕಾರಿ ಶಾಲೆಯಲ್ಲಿ ನಿರ್ಮಿಸಲಾಗಿರುವ ಸೌರ ಚಾವಣಿ
ಚಿಕ್ಕಬಿದರುಕಲ್ಲು ಸರ್ಕಾರಿ ಶಾಲೆಯಲ್ಲಿ ನಿರ್ಮಿಸಲಾಗಿರುವ ಸೌರ ಚಾವಣಿ   

ಬೆಂಗಳೂರು:ನಗರದ 47 ಸರ್ಕಾರಿ ಶಾಲೆಗಳಲ್ಲಿ ಶೀಘ್ರದಲ್ಲಿಯೇ ಸೌರ ವಿದ್ಯುತ್‌ ಉತ್ಪಾದನೆಯ ಸಂಭ್ರಮ ಮನೆ ಮಾಡಲಿದೆ.

ಹಿಂದೂಸ್ಥಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ನ (ಎಚ್‌ಎಎಲ್‌) ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯು (ಟೆರಿ) ಶಾಲೆಗಳಲ್ಲಿ ಸೌರಚಾವಣಿ ಅಳವಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಬೆಸ್ಕಾಂ ಯೋಜನೆಗೆ ಸಹಕಾರ ನೀಡಿದೆ.

ಮೊದಲ ಹಂತದಲ್ಲಿ 13, ಎರಡನೇ ಹಂತದಲ್ಲಿ 12 ಹಾಗೂ ಮೂರನೇ ಹಂತದಲ್ಲಿ 22 ಶಾಲೆಗಳಲ್ಲಿ ಸೌರಚಾವಣಿ ಅಥವಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ, ಮೊದಲ ಹಂತ ಪೂರ್ಣಗೊಂಡಿದ್ದು, ಎರಡನೆಯದು ಮುಕ್ತಾಯ ಹಂತದಲ್ಲಿದೆ. ಮೂರನೇ ಹಂತ ವರ್ಷದೊಳಗೆ ಮುಕ್ತಾಯವಾಗಲಿದೆ.

ADVERTISEMENT

‘ಈ ಸೌರ ಚಾವಣಿಗಳಿಂದ ಒಟ್ಟು 480 ಕಿಲೊವಾಟ್‌ ವಿದ್ಯುತ್‌ಸೌರ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. 13
ಶಾಲೆಗಳಿಂದ ಈಗ 200 ಕಿಲೊವಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ಎರಡು ಮತ್ತು ಮೂರನೇ ಹಂತದಲ್ಲಿ ಕ್ರಮವಾಗಿ 100 ಮತ್ತು 180 ಕಿಲೊವಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತದೆ’ ಎಂದು ಟೆರಿಯ ದಕ್ಷಿಣ ಪ್ರಾದೇಶಿಕ ಕೇಂದ್ರದ ಹಿರಿಯ ಸಂಚಾಲಕ ಸೆಂಥಿಲ್‌ಕುಮಾರ್‌ ಹೇಳುತ್ತಾರೆ.

ಜಾಗೃತಿ ಕಾರ್ಯಕ್ರಮವೇ ಯೋಜನೆಯಾಯಿತು:‘ಇಂಧನ ಉಳಿತಾಯದ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ
ಮೂಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಬೆಸ್ಕಾಂನಿಂದ ಟೆರಿಗೆ ಟೆಂಡರ್‌ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಇದನ್ನು ಗಮನಿಸಿದ ಎಚ್‌ಎಎಲ್‌, ಜಾಗೃತಿಯ ಜೊತೆಗೆ ಸೌರ ವಿದ್ಯುತ್‌ ಉತ್ಪಾದಿಸುವ ಕಾರ್ಯ ಕೈಗೆತ್ತಿಕೊಳ್ಳಲು ಕೋರಿತು. ಬೆಸ್ಕಾಂ ಮತ್ತು ಎಚ್‌ಎಎಲ್‌ ನೆರವಿನಿಂದ ಯೋಜನೆ ಜಾರಿ ಮಾಡಲಾಗುತ್ತಿದೆ’ ಎಂದು ಟೆರಿಯ ದಕ್ಷಿಣ ಪ್ರಾದೇಶಿಕ ಕೇಂದ್ರದ ಪರಿಸರ ಶಿಕ್ಷಣ ಮತ್ತು ಜಾಗೃತಿ ವಿಭಾಗದ ಸಂಚಾಲಕ ಡಾ. ಶ್ರೀಧರ್‌ ಬಾಬು ಹೇಳುತ್ತಾರೆ.

ಜಾಗೃತಿ ಕಾರ್ಯಕ್ರಮದಿಂದ ಮತ್ತು ಸೌರಚಾವಣಿ ಸ್ಥಾಪನೆಯಿಂದ ವಿದ್ಯಾರ್ಥಿಗಳಲ್ಲಿ ವಿದ್ಯುತ್‌ ಉಳಿತಾಯದ ಬಗ್ಗೆ ಅರಿವು ಮೂಡಿದೆ. ಮಕ್ಕಳ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಮನೆಯಲ್ಲಿ ಪಾಲಿಸುತ್ತಿದ್ದಾರೆ. ಜಾಗೃತಿ ಕಾರ್ಯಕ್ರಮಕ್ಕೂ ಮುನ್ನ ಮತ್ತು ನಂತರ, ವಿದ್ಯಾರ್ಥಿಗಳ ಮನೆಯ ವಿದ್ಯುತ್‌ ಬಳಕೆ ಪ್ರಮಾಣ ಪರಿಶೀಲಿಸಿದಾಗ, ಒಂದು ಮನೆಗೆ 10 ಯುನಿಟ್‌ನಷ್ಟು ವಿದ್ಯುತ್‌ ಉಳಿತಾಯವಾಗಿತ್ತು ಎಂದು ಅವರು ಹೇಳಿದರು.

ವಲಯದಲ್ಲಿ ಹೆಚ್ಚು ಫಲಿತಾಂಶ ಹೊಂದಿರುವ ಸರ್ಕಾರಿ ಶಾಲೆಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಶಾಲೆಯ ವಿದ್ಯುತ್‌ ಬೇಡಿಕೆ ಎಷ್ಟಿದೆ, ಸೌರ ಚಾವಣಿ ಅಳವಡಿಸಲು ಆ ಶಾಲೆಯ ಮೇಲೆ ಸ್ಥಳವಿದೆಯೇ ಮತ್ತು ಅದು ಸೂಕ್ತವಾಗಿದೆಯೇ (ನೆರಳು ಬೀಳದಂತೆ) ಎಂಬ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗಿದೆ.

ಮೂರು ವರ್ಷಗಳವರೆಗೆ ಟೆರಿಯೇ ಈ ಸೌರಚಾವಣಿಗಳನ್ನು ನಿರ್ವಹಿಸಲಿದೆ. ನಂತರ, ಆಯಾ ಶಾಲೆಗಳೇ ನಿರ್ವಹಿಸಬೇಕಾಗುತ್ತದೆ. ಸೌರ ಫಲಕಗಳು 20 ವರ್ಷಗಳವರೆಗೆ ಬಾಳಿಕೆ ಬರುತ್ತವೆ.

ಸ್ಥಳೀಯರಿಗೆ ಉದ್ಯೋಗ ಸೃಷ್ಟಿ
5 ಕಿಲೊವಾಟ್‌ನಿಂದ 10ಕಿಲೊವಾಟ್‌ನವರೆಗೆ ಮಾತ್ರ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯದ ಸೌರ ಫಲಕಗಳನ್ನು ಈ ಚಾವಣಿಯಲ್ಲಿ ಬಳಸಲಾಗಿದೆ. ಸಣ್ಣ ವರ್ತಕರಿಂದ ಈ ಫಲಕಗಳನ್ನು ಖರೀದಿಸಲಾಗಿದೆ.

ಇದರ ನಿರ್ವಹಣೆಗೆ ಇಬ್ಬರು ಬೇಕಾಗುತ್ತದೆ. ಸದ್ಯ, ಟೆರಿಯೇ ನಿರ್ವಹಣೆ ಜವಾಬ್ದಾರಿ ನೋಡಿಕೊಳ್ಳುತ್ತದೆ. ಸ್ಥಳೀಯ ಯುವಕರು ಇದರ ನಿರ್ವಹಣೆ ಕೆಲಸ ಕಲಿತರೆ ಅವರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಸೌರ ಫಲಕಗಳನ್ನು ಮಾರುವ ಉದ್ಯಮವನ್ನೂ ಪ್ರಾರಂಭಿಸಬಹುದಾಗಿದೆ.

ಸರ್ಕಾರಿ ಶಾಲೆಗೆ ಆದಾಯದ ಮೂಲ!
ಸೌರ ಚಾವಣಿಯು ಆಯಾ ಶಾಲೆಗೆ ಅಲ್ಪ ಆದಾಯದ ಮೂಲವಾಗಿಯೂ ಕೆಲಸ ಮಾಡುತ್ತಿವೆ. ಇಲ್ಲಿ ಉತ್ಪಾದನೆಯಾಗುವ ಸೌರವಿದ್ಯುತ್‌ ಅನ್ನು ಬೆಸ್ಕಾಂ ಗ್ರಿಡ್‌ಗೆ ಮಾರುವ ಅವಕಾಶ ಶಾಲೆಗಳಿಗೆ ಇದೆ. ಯುನಿಟ್‌ಗೆ ₹3 ಸಿಗುತ್ತದೆ. ಅಂದರೆ, ಒಂದು ಶಾಲೆ ತಿಂಗಳಿಗೆ ಗರಿಷ್ಠ ₹16 ಸಾವಿರ ಪಡೆಯಬಹುದು.

ಅತಿಥಿ ಶಿಕ್ಷಕರೊಬ್ಬರಿಗೆ ವೇತನ ನೀಡಲು ಅಥವಾ ಡೆಸ್ಕ್‌ ಕೊಳ್ಳಲು ಅಥವಾ ಶಾಲೆಗೆ ಬಣ್ಣ ಹಚ್ಚುವಂತಹ ಕಾರ್ಯಕ್ಕೆ ಈ ಹಣವನ್ನು ವಿನಿಯೋಗಿಸಬಹುದಾಗಿದೆ.

ಇದಲ್ಲದೆ, ಕೆಲವು ಸರ್ಕಾರಿ ಶಾಲೆಗಳ ಚಾವಣಿಗಳು ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದ್ದವು. ಸೌರಚಾವಣಿ ನಿರ್ಮಾಣವಾದ ನಂತರ, ಇಂತಹ ಚಟುವಟಿಕೆಗೂ ಕಡಿವಾಣ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.