ADVERTISEMENT

ಥಟ್ ಅಂತ ಹೇಳಿ: ಐದು ಸಾವಿರ ಸಂಚಿಕೆಯ ಹೊಸ್ತಿಲಲ್ಲಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 14:29 IST
Last Updated 9 ಅಕ್ಟೋಬರ್ 2025, 14:29 IST
<div class="paragraphs"><p>ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ ಥಟ್ ಅಂತಾ ಹೇಳಿ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ನಾ.ಸೋಮೇಶ್ವರ ಅವರು ಪುಸ್ತಕಗಳನ್ನು ವಿತರಣೆ ಮಾಡಿದರು. </p></div>

ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ ಥಟ್ ಅಂತಾ ಹೇಳಿ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ನಾ.ಸೋಮೇಶ್ವರ ಅವರು ಪುಸ್ತಕಗಳನ್ನು ವಿತರಣೆ ಮಾಡಿದರು.

   

ಬೆಂಗಳೂರು: ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಸಪ್ರಶ್ನೆ ಕಾರ್ಯಕ್ರಮ ಐದು ಸಾವಿರ ಸಂಚಿಕೆಯ ಹೊಸ್ತಿಲಲ್ಲಿದ್ದು, ಈ ಕಾರ್ಯಕ್ರಮ ಗಿನ್ನಿಸ್ ದಾಖಲೆಯತ್ತ ದಾಪುಗಾಲಿಟ್ಟಿದೆ.

2002ರ ಜನವರಿ 4ರಂದು ಪ್ರಾರಂಭವಾದ ಈ ಕಾರ್ಯಕ್ರಮ ಅಕ್ಟೋಬರ್ 13ರಂದು ಐದು ಸಾವಿರದನೇ ಸಂಚಿಕೆಯ ಪ್ರಸಾರಕ್ಕೆ ಸಜ್ಜಾಗಿದೆ. 11ರ ಬೆಳಿಗ್ಗೆ 10.30ಕ್ಕೆ ಜಿಕೆವಿಕೆ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಅರಣ್ಯ, ಜೀವಿಶಾಸ್ತ್ರ, ಪರಿಸರ ಸಚಿವ ಈಶ್ವರ ಖಂಡ್ರೆ ಪಾಲ್ಗೊಳ್ಳುತ್ತಿದ್ದಾರೆ ಎಂದು ದೂರದರ್ಶನ ಕೇಂದ್ರ ದಕ್ಷಿಣ ವಲಯದ ಉಪ ಮಹಾನಿರ್ದೇಶಕರಾದ ಭಾಗ್ಯವಾನ್ ತಿಳಿಸಿದ್ದಾರೆ.

ADVERTISEMENT

ಕಾರ್ಯಕ್ರಮಗಳ ಉಸ್ತುವಾರಿ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಎಚ್.ಎನ್. ಆರತಿ ನಿಭಾಯಿಸುತ್ತಿದ್ದು, ನಿರ್ಮಾಪಕಿ ಎಂ.ಎನ್. ಚಂದ್ರಕಲಾ ಈ ಸಂಚಿಕೆಗಳ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

23 ವರ್ಷಗಳ ಹಿಂದೆ ಉಷಾಕಿಣಿ ಅವರು ಈ ಕಾರ್ಯಕ್ರಮ ಆರಂಭಿಸಿದ್ದರು. 100ನೇ ಸಂಚಿಕೆಯಲ್ಲಿ ಸಾಹಿತಿ ಸುಧಾಮೂರ್ತಿ ಪಾಲ್ಗೊಂಡಿದ್ದರು. ಕನ್ನಡ ನಾಡು-ನುಡಿ, ನೆಲ-ಜಲ, ಸಾಂಸ್ಕೃತಿಕ ಸೊಗಡನ್ನು ನಾಡಿನ ಜನರಿಗೆ ಉಣಬಡಿಸುತ್ತಿರುವ ಥಟ್ ಅಂತ ಹೇಳಿ?! ಕಾರ್ಯಕ್ರಮ 2012ರಲ್ಲಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಗೌರವಕ್ಕೆ ಪಾತ್ರವಾಗಿತ್ತು.

ಕೋವಿಡ್ ಸಮಯದಲ್ಲಿ ಕೆಲಕಾಲ ಹೊರತುಪಡಿಸಿದಂತೆ, ನಿರಂತರವಾಗಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. 2500 ಗಂಟೆಗಳ ಪ್ರಸಾರದ ಅವಧಿಯಲ್ಲಿ 75 ಸಾವಿರ ಪ್ರಶ್ನೆಗಳನ್ನು ಕೇಳಲಾಗಿದ್ದು, 15 ಸಾವಿರ ಸ್ಪರ್ಧಿಗಳು ಭಾಗವಹಿಸಿ, 70 ಸಾವಿರ ಕನ್ನಡದ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಬಹುಮಾನವಾಗಿ ಪಡೆದಿದ್ದಾರೆ.

ಕಾರಾಗೃಹ ವಾಸಿಗಳಿಗೆ ವಿಶೇಷ ಸ್ಪರ್ಧೆ, ಅಂಧರು, ಎಚ್.ಐ.ವಿ. ಸೋಂಕಿತರು, ಐ.ಟಿ ತಜ್ಞರು, ಅನಿವಾಸಿ ಭಾರತೀಯರು ಹೀಗೆ ಹತ್ತು ಹಲವು ವಿಭಾಗಗಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗಿದೆ. ಮೆಟ್ರೊ ರೈಲಿನ ಪ್ರಯಾಣಿಕರೊಂದಿಗೆ, ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ವಿಶೇಷ ಸಂಚಿಕೆಗಳನ್ನು ಬಿತ್ತರಿಸಲಾಗಿದೆ ಎಂದು ಭಾಗ್ಯವಾನ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.