ಸಾಂದರ್ಭಿಕ ಚಿತ್ರ
ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಧ್ವಜಾರೋಹಣದ ಮೂಲಕ ಶುಕ್ರವಾರ ಚಾಲನೆ ದೊರೆಯಿತು.
ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಧ್ವಜಾರೋಹಣ ಹಾಗೂ ರಥೋತ್ಸವ ನೆರವೇರಿತು. ಏಪ್ರಿಲ್ 12ರ ಶನಿವಾರ ರಾತ್ರಿ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾರಥೋತ್ಸವ ನಡೆಯಲಿದೆ.
ಲಕ್ಷಾಂತರ ಜನರು ಸೇರುವ ಬೆಂಗಳೂರು ಕರಗ ಉತ್ಸವವನ್ನು ಈ ಬಾರಿ ಮತ್ತಷ್ಟು ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ. ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಮುಂಭಾಗದಲ್ಲಿ ಭಕ್ತರು ನಿಲ್ಲುವುದಕ್ಕೆ ಹೆಂಚಿನ ಚಾವಣಿಯನ್ನು ಬಾಲಕೃಷ್ಣ ಅವರ ನೆರವಿನೊಂದಿಗೆ ಅಳವಡಿಸಲಾಗಿದೆ ಎಂದು ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸತೀಶ್ ತಿಳಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಕರಗದ ಸಮಯದಲ್ಲಿ ಭಕ್ತಾದಿಗಳಿಗೆ, ವೀರಕುಮಾರರಿಗೆ ಹಣ್ಣುಗಳ ವಿತರಣೆ ಮಾಡಲಾಗುತ್ತದೆ. ವೀರಕುಮಾರರಿಗೆ ಆರತಿ ದೀಪದ ದಿನ ಹಾಗೂ ಹಸಿ ಕರಗದ ದಿನದಂದು ಕರಗದ ವಸ್ತ್ರವನ್ನು ವಿತರಿಸಲಾಗುತ್ತದೆ. ದೀಕ್ಷೆ ಪಡೆದವರಿಗೆ ದೇವಸ್ಥಾನದ ವತಿಯಿಂದ ಖಡ್ಗ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ವಹ್ನಿ ಕುಲ ಕ್ಷತ್ರಿಯ ಮಹಿಳೆಯರ ಬೇಡಿಕೆಯನುಸಾರ, ಪ್ರಥಮ ಬಾರಿಗೆ ದೇವಸ್ಥಾನದ ವತಿಯಿಂದ ಒಂದು ಮನೆಗೆ ಒಂದು ಆರತಿ ದೀಪವನ್ನು ಉಚಿತವಾಗಿ ನೀಡಲಾಗುತ್ತದೆ. ಒಂಬತ್ತು ದಿನದ ಕರಗ ಮಹೋತ್ಸವದಲ್ಲಿ ಪ್ರತಿ ದಿನ ಸಂಜೆ ಭಕ್ತಾದಿಗಳಿಗೆ ಶಾಸಕ ಎನ್.ಎ. ಹ್ಯಾರಿಸ್ ಅವರು ದಾಸೋಹ ಆಯೋಜಿಸಿದ್ದಾರೆ ಎಂದು ಸತೀಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.