ADVERTISEMENT

ರಾಜ್ಯದಲ್ಲಿ ಈ ಬಾರಿ ಮೇವು ಕೊರತೆ ಇಲ್ಲ, 1.76 ಕೋಟಿ ಟನ್‌ ಒಣ ಮೇವು ದಾಸ್ತಾನು

ರಾಜೇಶ್ ರೈ ಚಟ್ಲ
Published 14 ಏಪ್ರಿಲ್ 2021, 20:57 IST
Last Updated 14 ಏಪ್ರಿಲ್ 2021, 20:57 IST
ಪ್ರಭು ಚವ್ಹಾಣ್
ಪ್ರಭು ಚವ್ಹಾಣ್   

ಬೆಂಗಳೂರು: ರೈತರ ಬಳಿ ಸರಾಸರಿ ಅಂದಾಜು 30 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಹೀಗಾಗಿ, ಈ ಬಾರಿ ರಾಜ್ಯದಲ್ಲಿ ಮೇವಿನ ಕೊರತೆ ಇಲ್ಲ. ಮೇವು ಬ್ಯಾಂಕ್‌ ತೆರೆಯುವ ಪ್ರಮೇಯವೂ ಇಲ್ಲ.

ಪಶು ಸಂಗೋಪನೆ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಒಟ್ಟು 2.87 ಕೋಟಿ ಜಾನುವಾರುಗಳಿವೆ. ಒಣ ಮೇವು ಆಧಾರದಲ್ಲಿ ದೊಡ್ಡ ಜಾನುವಾರುಗಳಿಗೆ ದಿನವೊಂದಕ್ಕೆ 6 ಕಿಲೋ, ಸಣ್ಣ ಜಾತಿಯ ಜಾನುವಾರುಗಳಿಗೆ ಅರ್ಧ ಕಿಲೋ ಮೇವು ಅಗತ್ಯವಿದೆ.

ಒಟ್ಟು ಜಾನುವಾರುಗಳನ್ನು ಪರಿಗಣಿಸಿದರೆ, ಪ್ರತಿ ವಾರ 5.41 ಲಕ್ಷ ಟನ್ ಒಣ ಮೇವು ಅಗತ್ಯವಿದೆ. ಸದ್ಯ ರೈತರ ಬಳಿ 1.76 ಕೋಟಿ ಟನ್‌ ಒಣ ಮೇವು ದಾಸ್ತಾನಿದೆ. ವಾರಕ್ಕೆ ಲೆಕ್ಕ ಹಾಕಿದರೆ, 30 ವಾರಗಳಿಗೆ ಹೆಚ್ಚು ಅವಧಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ.

ADVERTISEMENT

‘ಮೇವಿನ ಕೊರತೆಯಿಲ್ಲ. ಎಲ್ಲ ಜಿಲ್ಲೆಗಳಲ್ಲಿ ಸದ್ಯದ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಿದೆ. ಹೀಗಾಗಿ, ಖರೀದಿಯ ಅಗತ್ಯ ಇಲ್ಲ. ಒಂದೊಮ್ಮೆ ಎಲ್ಲಿಯಾದರೂ ಮೇವಿನ ಸಮಸ್ಯೆ ಎದುರಾದರೆ ಆಯಾ ಜಿಲ್ಲೆಗಳಲ್ಲಿ ಪಶುಸಂಗೋಪನೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಚರ್ಚೆ ಮಾಡಿ, ಮೇವಿನ
ಬ್ಯಾಂಕ್ ತೆರೆದು ಮೇವು ಒದಗಿಸುವ ವ್ಯವಸ್ಥೆ ಮಾಡಲಿದ್ದಾರೆ’ ಎಂದು ಪಶು ಪಾಲನಾ ಮತ್ತು
ಪಶುವೈದ್ಯ ಸೇವಾ ಇಲಾಖೆಯ ನಿರ್ದೇಶಕ ಬಿ.ಎನ್‌. ಶಿವರಾಮ್ ತಿಳಿಸಿದರು.

ಹಾವೇರಿ, ಬಳ್ಳಾರಿ, ಕಲಬುರ್ಗಿ, ತುಮಕೂರು, ಧಾರವಾಡ ಜಿಲ್ಲೆಗಳಲ್ಲಿ 40 ವಾರಕ್ಕಿಂತಲೂ ಹೆಚ್ಚು ಅವಧಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ, ಕೊಡಗು, ಬಾಗಲಕೋಟೆ, ಶಿವಮೊಗ್ಗ, ರಾಯಚೂರು, ಕೊಪ್ಪಳದಲ್ಲಿ ದಾಸ್ತಾನು ಪ್ರಮಾಣ ಕಡಿಮೆ ಇದೆ. ಆದರೂ ಮುಂದಿನ 15 ವಾರಗಳಿಗೆ ಯಾವುದೇ ಸಮಸ್ಯೆ ಇಲ್ಲ. ಕೆಲವು ಕಡೆಗಳಲ್ಲಿ ಈಗಾಗಲೇ ಮಳೆ ಬಿದ್ದಿರುವುದರಿಂದ ಕೆಲವೇ ದಿನಗಳಲ್ಲಿ ಹಸಿ ಮೇವು ಕೂಡಾ ಲಭ್ಯವಾಗಲಿದೆ.

‘ಮಾರುಕಟ್ಟೆಯಲ್ಲಿ ಒಣ ಮೇವು ಟನ್‌ಗೆ ಮಾರಾಟ ದರ ₹ 5 ಸಾವಿರದಿಂದ ₹ 6 ಸಾವಿರ, ಹಸಿ ಮೇವು ಟನ್‌ಗೆ ₹ 4 ಸಾವಿರ, ಪಶು ಆಹಾರ ಸರಾಸರಿ ಟನ್‌ಗೆ ₹ 21 ಸಾವಿರ, ಖನಿಜ ಮಿಶ್ರಿತ ಪೌಷ್ಟಿಕ ಆಹಾರಕ್ಕೆ ಕಿಲೊಗೆ ₹ 100ರಿಂದ ₹ 120 ಇದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

2020–21ನೇ ಸಾಲಿನಲ್ಲಿ ಅಂತ್ಯದಲ್ಲಿ ಎಲ್ಲ 30 ಜಿಲ್ಲೆಗಳ ರೈತರಿಗೆ ಒಟ್ಟು 1.34 ಲಕ್ಷ ಮೇವಿನ ಬೀಜದ ಕಿರು ಪೊಟ್ಟಣ ವಿತರಿಸಲಾಗಿದೆ. ಅತಿ ಹೆಚ್ಚು ಪೊಟ್ಟಣಗಳನ್ನು ತುಮಕೂರು (34,923), ಹಾಸನ (16,076), ಚಿಕ್ಕಬಳ್ಳಾಪುರ (12,623), ಶಿವಮೊಗ್ಗ (7,125), ಹಾವೇರಿ (5,945),ಬಾಗಲಕೋಟೆ (5850), ವಿಜಯಪುರ (5,243), ಚಿಕ್ಕಮಗಳೂರು (4834) ಜಿಲ್ಲೆಗಳಲ್ಲಿ ವಿತರಿಸಲಾಗಿದೆ. ಈ ಬೀಜ ಬಳಸಿ ರೈತರು ಬೆಳೆದ ಮೇವು ಕೂಡಾ ಕಟಾವಿಗೆ ಲಭ್ಯವಿದೆ.

***

ಜಿಲ್ಲಾಧಿಕಾರಿ, ಸಿಇಒ ಜೊತೆ ಸಂಪರ್ಕದಲ್ಲಿದ್ದು, ಜಾನುವಾರುಗಳಿಗೆ ಮೇವು, ನೀರಿನ ಕೊರತೆ ಆಗದಂತೆ ನೋಡಿಕೊಳ್ಳಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ

- ಪ್ರಭು ಚವ್ಹಾಣ್, ಪಶುಸಂಗೋಪನೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.