ಬೆಂಗಳೂರು: ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಹಾಗೂ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಹಾಗೂ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎರಡು ಪ್ರಕರಣಗಳಿಂದ 51 ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಚೇತನ್(35), ಆದರ್ಶ್(29) ಹಾಗೂ ಪವನ್‌ಕುಮಾರ್(21) ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹23 ಲಕ್ಷ ಮೌಲ್ಯದ 34 ಲ್ಯಾಪ್‌ಟಾಪ್, 28 ಮೊಬೈಲ್ ಹಾಗೂ ನಾಲ್ಕು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
‘ನಾಲ್ಕು ಲ್ಯಾಪ್‌ಟಾಪ್ ಹಾಗೂ ಒಂದು ವಾಚ್ ಕಳ್ಳತನ ಆಗಿರುವ ಬಗ್ಗೆ ಕುಮಾರಸ್ವಾಮಿ ಲೇಔಟ್‌ನ ಒಂದನೇ ಹಂತದ ನಿವಾಸಿ ಪೃಥ್ವಿರಾಜ್ ಎಂಬುವವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.
ಮೂವರು ಆರೋಪಿಗಳು, ನಗರದಲ್ಲೇ ಬೈಕ್‌ಗಳ ಕಳವು ಮಾಡುತ್ತಿದ್ದರು. ಬಳಿಕ ಅವುಗಳನ್ನು ಬಳಸಿಕೊಂಡು ಯುವಕರ ಪಿ.ಜಿ.ಗಳನ್ನು ಗುರುತಿಸುತ್ತಿದ್ದರು. ನಸುಕಿನಲ್ಲಿ ರೂಮ್‌ಗಳ ಬಳಿ ಹೋಗಿ, ಕಿಟಕಿ ಪಕ್ಕದಲ್ಲೇ ಇರುತ್ತಿದ್ದ ಕೀ ತೆಗೆದು ಕಳವು ಮಾಡಿ ಬಳಿಕ ಪರಾರಿ ಆಗುತ್ತಿದ್ದರು ಎಂದು ಪೊಲೀಸರು ಹೇಳಿದರು.
‘ಆರೋಪಿಗಳ ಪೈಕಿ ಚೇತನ್ ಕೊರಿಯರ್ ಬಾಯ್ ಆಗಿದ್ದು, ಪವನ್ ಮತ್ತು ಆದರ್ಶ್ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಚೇತನ್ ಕೊರಿಯರ್ ವಿತರಿಸಲು ಹೋದಾಗ ಪಿ.ಜಿ ಮತ್ತು ಅವಿವಾಹಿತ ಯುವಕರು ವಾಸವಾಗಿರುವ ಕೊಠಡಿಗಳನ್ನು ಗುರುತಿಸುತ್ತಿದ್ದರು. ನಂತರ, ತನ್ನ ಸ್ನೇಹಿತರ ಜತೆ ಹೋಗಿ ಕಳವು ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
ಕಳವು ಮಾಡಿದ ಲ್ಯಾಪ್‌ಟಾಪ್ ಹಾಗೂ ವಾಚ್‌ಗಳನ್ನು ಹಾಸನ, ಚನ್ನರಾಯಪಟ್ಟಣ, ಬೆಂಗಳೂರಿನಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಮೋಜು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ 16 ಲ್ಯಾಪ್‌ಟಾಪ್ ಕಳವು ಪ್ರಕರಣಗಳು, 4 ದ್ವಿಚಕ್ರ ವಾಹನ ಕಳವು ಪ್ರಕರಣಗಳು, ಮೊಬೈಲ್ ಇ–ಲಾಸ್ಟ್‌ನಲ್ಲಿ ದಾಖಲಾಗಿದ್ದ 11 ಮೊಬೈಲ್ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸೇಲಂನಿಂದ ಬಂದು ಕಳವು: ಒಬ್ಬನ ಬಂಧನ
ತಮಿಳುನಾಡಿನಿಂದ ಬಂದು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಗುಂಪು ಸೇರುವ ಕಾಫಿ ಡೇ ಹೋಟೆಲ್‌ಗಳ ಬಳಿ ಕಾರಿನ ಕಿಟಕಿ ಗಾಜು ಒಡೆದು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಸದ್ದಾನಾಯ್ಡು(32) ಬಂಧಿತ. ಆರೋಪಿಯಿಂದ ₹12 ಲಕ್ಷ ಮೌಲ್ಯದ 17 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ಸಹೋದರ ಗಂಗೇಶ್ ಎಂಬಾತ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.
‘ಸದ್ದಾನಾಯ್ಡು ಹಾಗೂ ಅವರ ಸಹೋದರ ಗಂಗೇಶ್ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸೇಲಂನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಬೆಂಗಳೂರಿಗೆ ಬೈಕ್‌ನಲ್ಲೇ ಬರುತ್ತಿದ್ದರು. ಸಾಫ್ಟ್‌ವೇರ್ ಎಂಜಿನಿಯರ್‌ಗಳು ಹೆಚ್ಚು ಸಂಖ್ಯೆಯಲ್ಲಿ ಸೇರುವ ಕಾಫಿ ಡೇ ಹೋಟೆಲ್‌ಗಳು ಪಬ್ ಹಾಗೂ ರೆಸ್ಟೋರೆಂಟ್‌ಗಳ ಬಳಿ ಬಂದು ಕಾರಿನ ಒಳಗಡೆ ಪರಿಶೀಲಿಸುತ್ತಿದ್ದರು. ಕಾರಿನ ಒಳಗೆ ಲ್ಯಾಪ್‌ಟಾಪ್ ಬ್ಯಾಗ್ ಕಂಡರೆ ಗಾಜು ಒಡೆದು ಕಳ್ಳತನ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಜಯನಗರದ 5ನೇ ಹಂತದಲ್ಲಿ ಇರುವ ಕಾಫಿ ಅಂಗಡಿಯ ಎದುರು ಪಾರ್ಕಿಂಗ್ ಮಾಡಿದ್ದ ಕಾರಿನ ಕಿಟಕಿಯ ಗಾಜು ಒಡೆದು ಲ್ಯಾಪ್‌ಟಾಪ್ ಅನ್ನು ಇತ್ತೀಚೆಗೆ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ಪ್ರಕರಣ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
ಸಂಜೆ ಬೆಂಗಳೂರಿಗೆ ಬರುತ್ತಿದ್ದ ಸಹೋದರರು:
‘ತಮಿಳುನಾಡಿನಿಂದ ಸಂಜೆ 6 ಗಂಟೆ ಸುಮಾರಿಗೆ ಬೆಂಗಳೂರಿಗೆ ಬೈಕ್‌ನಲ್ಲಿ ಬರುತ್ತಿದ್ದ ಸದ್ದಾನಾಯ್ಡು ಹಾಗೂ ಗಂಗೇಶ್ ರಾತ್ರಿ 9 ಗಂಟೆವರೆಗೂ ವಿವಿಧೆಡೆ ಸುತ್ತಾಡಿ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಸದ್ದಾನಾಯ್ಡು ಬಂಧನದಿಂದ ಜಯನಗರ ಠಾಣೆಯಲ್ಲಿ ದಾಖಲಾಗಿದ್ದ 5 ಲ್ಯಾಪ್‌ಟಾಪ್ ಕಳವು ಪ್ರಕರಣಗಳು ಪತ್ತೆ ಆಗಿವೆ. ಆರೋಪಿಗಳು ಈ ಹಿಂದೆ ಸೇಲಂ ಗ್ಯಾಂಗ್ ಜೊತೆ ಸೇರಿ ಕೃತ್ಯ ಎಸಗುತ್ತಿದ್ದರು. ಇತ್ತೀಚೆಗೆ ಇಬ್ಬರೇ ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.