ADVERTISEMENT

ಹಳಿಗಳ ಬಳಿ ಸುಲಿಗೆಕೋರರು!

ಚಲಿಸುತ್ತಿದ್ದ ರೈಲಿನಿಂದ ಹೊರಗೆಳೆಯುವ ದುಷ್ಕರ್ಮಿಗಳು: ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳು

ಸಂತೋಷ ಜಿಗಳಿಕೊಪ್ಪ
Published 30 ಜುಲೈ 2019, 19:30 IST
Last Updated 30 ಜುಲೈ 2019, 19:30 IST
ದುಷ್ಕರ್ಮಿಗಳು ಕೃತ್ಯ ಎಸಗಿದ್ದ ಜಾಗ ಹಾಗೂ ಏರಿ ಕುಳಿತಿದ್ದ ‘ಸಿಗ್ನಲ್‌’ ಕಂಬಗಳು
ದುಷ್ಕರ್ಮಿಗಳು ಕೃತ್ಯ ಎಸಗಿದ್ದ ಜಾಗ ಹಾಗೂ ಏರಿ ಕುಳಿತಿದ್ದ ‘ಸಿಗ್ನಲ್‌’ ಕಂಬಗಳು   

ಬೆಂಗಳೂರು: ನಗರದಿಂದ ಹೊರಜಿಲ್ಲೆ, ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರೈಲು ಹಳಿಗಳು ಇತ್ತೀಚಿನ ದಿನಗಳಲ್ಲಿ ಸುಲಿಗೆ
ಕೋರರ ತಾಣಗಳಾಗಿ ಮಾರ್ಪಡುತ್ತಿವೆ. ಸುಲಿಗೆಗಳ ಬಗ್ಗೆ ಸಂತ್ರಸ್ತರು ಪೊಲೀಸರಿಗೂ ದೂರು ನೀಡುತ್ತಿದ್ದಾರೆ.

ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ನಿರ್ಗಮಿಸುವ ಹಾಗೂ ಬರುವ ರೈಲುಗಳಿಗೆ ಸಂಚಾರ ಸೂಚನೆಗಳನ್ನು ನೀಡುವ ಸಿಗ್ನಲ್‌ ಕಂಬಗಳು ಹಳಿಯುದ್ದಕ್ಕೂ ಇವೆ. ಇವುಗಳನ್ನು ಏರಿ ನಿಲ್ಲುವ ದುಷ್ಕರ್ಮಿಗಳು ಪ್ರಯಾಣಿಕರ ಸುಲಿಗೆ ಮಾಡುತ್ತಿದ್ದಾರೆ.

ರೈಲು ನಿಲ್ದಾಣದಲ್ಲಿ ಸದ್ಯ 9 ಪ್ಲಾಟ್‌ಫಾರಂಗಳಿದ್ದು, ನಿತ್ಯವೂ 350ಕ್ಕೂ ಹೆಚ್ಚು ರೈಲುಗಳು ಬಂದು ಹೋಗುತ್ತವೆ. ರೈಲುಗಳ ಬಾಗಿಲು ಬಳಿ ನಿಲ್ಲುವ ಹಾಗೂ ಕಿಟಕಿ ಬಳಿ ಕುಳಿತುಕೊಳ್ಳುವ ಪ್ರಯಾಣಿಕರನ್ನು ಗುರಿಯಾಗಿಸಿ ದುಷ್ಕರ್ಮಿಗಳು ಕೃತ್ಯ ಎಸಗುತ್ತಿದ್ದಾರೆ. ಮೊಬೈಲ್, ಪರ್ಸ್ ಹಾಗೂ ಆಭರಣ ಕಸಿದುಕೊಂಡು ಪರಾರಿಯಾಗುತ್ತಿದ್ದಾರೆ.

ADVERTISEMENT

ಸುಲಿಗೆ ಮಾಡುವ ಯತ್ನದಲ್ಲಿ ಪ್ರಯಾಣಿಕರನ್ನೇ ರೈಲಿನಿಂದ ಹೊರಗೆಳೆದು ಹಳಿಯ ಮೇಲೆ ಬೀಳಿಸಿ ಅವರ ಪ್ರಾಣಕ್ಕೆ ಸಂಚಕಾರ ತಂದ ಪ್ರಕರಣಗಳೂ ನಡೆದಿವೆ. ಹೀಗೆ, ಸಿಗ್ನಲ್ ಕಂಬದ ಮೇಲೆ ನಿಂತುಕೊಂಡು ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳು ರೈಲ್ವೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

‘ಸುಲಿಗೆ ಆರೋಪದಡಿ ನಾಗಾ (18) ಹಾಗೂ ಹರಿಪ್ರಸಾದ್ (20) ಎಂಬುವರನ್ನು ಬಂಧಿಸಲಾಗಿದೆ. ಈ ಇಬ್ಬರೂ 11 ಮೊಬೈಲ್ ಹಾಗೂ ಎರಡು ಚಿನ್ನದ ಸರ ಸುಲಿಗೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ಡಿಜಿಪಿ ಕಚೇರಿ ನೌಕರನನ್ನೇ ಹೊರಗೆಳೆದರು: ‘ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಬಿ.ಆರ್. ಸತೀಶ್ ಎಂಬುವರನ್ನೇ ರೈಲಿನಿಂದ ಹೊರಗೆಳೆದು ಸುಲಿಗೆ ಮಾಡಲಾಗಿದೆ’ ಎಂದು ರೈಲ್ವೆ ಪೊಲೀಸ್‌ನ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ 22ರಂದು ಸಂಜೆ ಅರಸೀಕೆರೆ ಪ್ಯಾಸೆಂಜರ್ ರೈಲಿನಲ್ಲಿ ತುಮಕೂರಿಗೆ ಹೊರಟಿದ್ದ ಸತೀಶ್, ಬಾಗಿಲಿನ ಬಳಿ ನಿಂತಿದ್ದರು. ನಿಲ್ದಾಣ ಸಮೀಪದಲ್ಲೇ ಕಂಬದ ಮೇಲಿದ್ದ ದುಷ್ಕರ್ಮಿಗಳು, ಸತೀಶ್ ಅವರ ಎರಡು ಮೊಬೈಲ್ ಕಸಿದು, ಅವರನ್ನು ಹೊರಗೆಳೆದು ಬೀಳಿಸಿದ್ದಾರೆ. ಓಕಳಿಪುರದ ಸೇತುವೆಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದು ವಿವರಿಸಿದರು.

ನಾನಾ ರೀತಿಯಲ್ಲಿ ಸುಲಿಗೆ: ‘ಹಳಿ ಹಾದು ಹೋಗುವ ಶ್ರೀರಾಮಪುರ, ಓಕಳಿಪುರ, ಕೆ.ಪಿ. ಅಗ್ರಹಾರ, ಕೆಂಗೇರಿ, ಜ್ಞಾನಭಾರತಿ ಮತ್ತಿತರ ಕಡೆ ಇಂಥ ಪ್ರಕರಣಗಳು ನಡೆಯುತ್ತಿವೆ. ಕೆಲವರಷ್ಟೇ ದೂರು ನೀಡಿದ್ದಾರೆ’ ಎಂದರು.

‘ನಿಲ್ದಾಣದಿಂದ ಹೊರಡುವಾಗ ರೈಲಿನ ವೇಗ ನಿಧಾನಗತಿಯಲ್ಲಿರುತ್ತದೆ. ಅದೇ ಸಂದರ್ಭದಲ್ಲೇ ದುಷ್ಕರ್ಮಿಗಳು ಹೊಂಚುಹಾಕಿ ಪ್ರಯಾಣಿಕರ ಜೇಬಿಗೆ ಕೈ ಹಾಕುತ್ತಾರೆ. ಯಾರಾದರೂ ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿದ್ದರೆ, ಕೋಲಿನಿಂದ ಹೊಡೆದು ಮೊಬೈಲ್ ಬೀಳಿಸುತ್ತಾರೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ನಿಲ್ದಾಣದಿಂದ ಹೊರಟ ರೈಲಿನ ಬಾಗಿಲು ಬಳಿಯೇ ಕುಳಿತುಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಯುವಕ – ಪ್ರಜಾವಾಣಿ ಚಿತ್ರ/ಅನೂಪ್ ಆರ್.ತಿಪ್ಪೇಸ್ವಾಮಿ

‘ಬಾಗಿಲು ಬಳಿ ನಿಲ್ಲಬೇಡಿ’
‘ಮೊಬೈಲ್‌ನಲ್ಲಿ ಮಾತನಾಡುತ್ತ ಅಥವಾ ಮೊಬೈಲ್‌ ಹಿಡಿದುಕೊಂಡು ರೈಲುಗಳ ಬಾಗಿಲ ಬಳಿ ನಿಲ್ಲುವ ಯಾಣಿಕರನ್ನೇಸುಲಿಗೆ ಮಾಡಲಾಗುತ್ತಿದೆ. ಪ್ರಯಾಣಿಕರು ಎಚ್ಚರಿಕೆ ವಹಿಸಬೇಕು. ಬಾಗಿಲ ಬಳಿ ನಿಲ್ಲದಿರುವುದು ಒಳ್ಳೆಯದು’ ಎಂದು ಪೊಲೀಸರು ಸಲಹೆ ನೀಡಿದರು.

‘ರೈಲು ಹಳಿ ಅಕ್ಕಪಕ್ಕದಲ್ಲಿ ಯಾರಾದರೂ ಶಂಕಾಸ್ಪದವಾಗಿ ನಿಂತಿದ್ದರೆ, ಅಂಥವರ ಬಗ್ಗೆ ಠಾಣೆಗೆ ಮಾಹಿತಿ ನೀಡಬೇಕು. ಪ್ರಯಾಣಿಕರು ಎಚ್ಚೆತ್ತುಕೊಂಡರಷ್ಟೇ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬಹುದು’ ಎಂದು ಅಭಿಪ್ರಾಯಪಟ್ಟರು.

‘ಅಕ್ರಮ ಪ್ರವೇಶ ಸಲೀಸು’
ಓಕಳಿಪುರದಿಂದ ನಿಲ್ದಾಣಕ್ಕೆ ಬರುವ ಜಾಗದಲ್ಲಿ ಭದ್ರತೆ ಅಷ್ಟಕ್ಕಷ್ಟೇ. ಇಂಥ ಮಾರ್ಗದಲ್ಲಿ ಬಂದು ಹಳಿ ಪಕ್ಕದಲ್ಲಿ ನಿಂತುಕೊಂಡು ಸುಲಿಗೆಕೋರರು ಕೃತ್ಯ ಎಸಗುತ್ತಿದ್ದಾರೆ.

‘ನಿಲ್ದಾಣದ ಸುತ್ತಲೂ ಅಕ್ರಮವಾಗಿ ಯಾರೊಬ್ಬರೂ ನುಸುಳದಂತೆ ವ್ಯವಸ್ಥೆ ಮಾಡಿದರೆ ಇಂಥ ಕೃತ್ಯಗಳನ್ನು ತಡೆಯಬಹುದು’ ಎಂದು ಸ್ಥಳೀಯ ನಿವಾಸಿ ರಾಮಚಂದ್ರ ಪ್ರತಿಕ್ರಿಯಿಸಿದರು.

‘ರೈಲ್ವೆ ಸೇತುವೆ ಪಕ್ಕದಲ್ಲಿರುವ ಕಾಲುದಾರಿ ಮೂಲಕ ದುಷ್ಕರ್ಮಿಗಳು, ಹಳಿ ಬಳಿ ಹೋಗಿದ್ದಾರೆ. ತಗ್ಗು ಪ್ರದೇಶದಲ್ಲಿ ಅವಿತುಕೊಂಡು ಕೃತ್ಯ ಎಸಗುತ್ತಿದ್ದಾರೆ. ಆಗಿಂದಾಗ್ಗೆಇಂಥ ಪ್ರಕರಣಗಳು ನಡೆಯುತ್ತಿವೆ. ಪೊಲೀಸರು ಕಟ್ಟುನಿಟ್ಟಿನ ಕ್ರಮಜರುಗಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.