ADVERTISEMENT

ಟೊಮೆಟೊ ಬೆಳೆದು ನಷ್ಟ | ಸಾಲ ತೀರಿಸಲು ಕಳ್ಳತನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:45 IST
Last Updated 17 ಸೆಪ್ಟೆಂಬರ್ 2024, 15:45 IST
ಮರುಗೇಶ್‌ 
ಮರುಗೇಶ್‌    

ಬೆಂಗಳೂರು: ವೈಟ್‌ಫೀಲ್ಡ್‌ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರು 57 ಲ್ಯಾಪ್‌ಟಾಪ್‌ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲ್ಲೂಕಿನ ತೋರಪಲ್ಲಿ ಗ್ರಾಮದ ಮುರುಗೇಶ್‌ ಎಂಬುವವರನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತನಿಂದ ₹22 ಲಕ್ಷ ಮೌಲ್ಯದ 50 ಲ್ಯಾಪ್‌ಟಾಪ್‌ ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ವೈಟ್‌ಫೀಲ್ಡ್‌ನ ಐಟಿಪಿಎಲ್‌ನ ಲ್ಯಾವಿಗೇಟರ್‌ ಕಟ್ಟಡದಲ್ಲಿರುವ ‘ಟೆಲಿಕಲರ್ ಇಂಡಿಯಾ’ದ ವ್ಯವಸ್ಥಾಪಕ ಅತುಲ್‌ ಹ್ಯಾವೆಲ್‌ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆದು ಬಂಧಿಸಲಾಯಿತು ಎಂದು ಹೇಳಿದರು.

‘ಟೆಲಿಕಲರ್ ಇಂಡಿಯಾದಲ್ಲಿ ಕಳೆದ ಫೆಬ್ರುವರಿಯಿಂದ ಸಿಸ್ಟಂ ಅಡ್ಮಿನ್‌ ಹುದ್ದೆಯಲ್ಲಿ ಆರೋಪಿ ಮುರುಗೇಶ್‌ ಕೆಲಸ ಮಾಡುತ್ತಿದ್ದ. ಕಂಪನಿಗೆ ಸೇರಿದ ಲ್ಯಾಪ್‌ಟಾಪ್‌ಗಳನ್ನು ಇಡುತ್ತಿದ್ದ ಸ್ಥಳ ಆರೋಪಿಗೆ ತಿಳಿದಿತ್ತು. ನಿತ್ಯ ಕೆಲಸಕ್ಕೆ ಬರುತ್ತಿದ್ದ ಆರೋಪಿ, ಒಂದೊಂದೇ ಲ್ಯಾಪ್‌ಟಾಪ್‌ ಕಳವು ಮಾಡಿದ್ದ. ಹೀಗೆ 57 ಲ್ಯಾಪ್‌ಟಾಪ್‌ ಕದ್ದು ಮಾತೃ ಸಂಸ್ಥೆ ತೊರೆದು ತಮಿಳುನಾಡಿನ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ’ ಎಂದು ಅವರು ಮಾಹಿತಿ ನೀಡಿದರು.

‘ದೂರು ದಾಖಲಾದ ಮೇಲೆ ಕಂಪನಿಯ ಸುತ್ತಮುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಸಿಸ್ಟಿಂ ಅಡ್ಮಿನ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಲ್ಯಾಟ್‌ಟಾಪ್‌ ಕಳವು ಮಾಡಿದ್ದು ಎಂಬುದು ತನಿಖೆಯಿಂದ ಗೊತ್ತಾಗಿತ್ತು. ತಮಿಳುನಾಡಿನ ಹೊಸೂರಿನ ರಾಘವೇಂದ್ರ ಚಿತ್ರಮಂದಿರದಲ್ಲಿ ಆರೋಪಿ ಸಿನಿಮಾ ವೀಕ್ಷಣೆ ಮಾಡುತ್ತಿದ್ದ. ಅಲ್ಲಿಗೆ ತೆರಳಿದ ವೈಟ್‌ಫೀಲ್ಡ್ ಠಾಣೆ ಪೊಲೀಸರು, ಆರೋಪಿ ಕುಳಿತಿದ್ದ ಆಸನದಿಂದ ಸ್ವಲ್ಪ ದೂರದಲ್ಲಿ ಕುಳಿತಿದ್ದರು. ಸಿನಿಮಾ ಪ್ರದರ್ಶನ ಮುಕ್ತಾಯವಾದ ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಲ್ಯಾಪ್‌ಟಾಪ್‌ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

‘ಕೋವಿಡ್ ಸಂದರ್ಭದಲ್ಲಿ ಆರೋಪಿ ಆರು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದ. ಟೊಮೆಟೊ ಬೆಳೆಯಿಂದ ₹25 ಲಕ್ಷ ನಷ್ಟವಾಗಿತ್ತು. ಸಾಲ ತೀರಿಸಲು ಕಳವು ಮಾಡಿದ್ದಾಗಿ ಹೇಳಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಹೊಸೂರಿನಲ್ಲಿರುವ ಲ್ಯಾಪ್‌ಟಾಪ್‌ ರಿಪೇರಿ ಹಾಗೂ ಮಾರಾಟ ಮಾಡುವ ಅಂಗಡಿಗೆ 45 ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡಿದ್ದ. ಮತ್ತೊಬ್ಬರಿಗೆ ಐದು ಲ್ಯಾಪ್‌ಟಾಪ್‌ ಮಾರಾಟ ಮಾಡಿದ್ದ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.