ADVERTISEMENT

₹15 ಕೋಟಿ ಮೌಲ್ಯ ಚಿನ್ನಾಭರಣ ಕಳ್ಳತನ: ಆರೋಪಿಗಳು ಸಿಕ್ಕಿದರೂ ಕರೆತರಲು ತೊಡಕು

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 23:49 IST
Last Updated 9 ಜನವರಿ 2025, 23:49 IST
ಚಿನ್ನ
ಚಿನ್ನ   

ಬೆಂಗಳೂರು: ಮಾಲೀಕನ ಮನೆಯಲ್ಲಿ ನಗದು, ಚಿನ್ನಾಭರಣ ಸೇರಿದಂತೆ ₹15.15 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ನೇಪಾಳದಲ್ಲಿ ಪತ್ತೆಹಚ್ಚಿದರೂ ತಾಂತ್ರಿಕ ಸಮಸ್ಯೆಯಿಂದಾಗಿ ಅವರನ್ನು ನಗರಕ್ಕೆ ಕರೆತರಲು ವಿಜಯನಗರ ಪೊಲೀಸರಿಗೆ ಸಾಧ್ಯವಾಗಿಲ್ಲ.  

ವಿಜಯನಗರದ ಅರಿಹಂತ್‌ ಚಿನ್ನಾಭರಣ ಅಂಗಡಿ ಮಾಲೀಕ ಸುರೇಂದ್ರ ಕುಮಾರ್ ಜೈನ್‌ ಅವರ ಮನೆಯಲ್ಲಿದ್ದ ₹14.75 ಕೋಟಿ ಮೌಲ್ಯದ ಚಿನ್ನಾಭರಣ, ₹40.80 ಲಕ್ಷ ನಗದು ಕಳ್ಳತನವಾಗಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳದ ನಮ್ರಾಜ್‌ ಜತೆಗೆ ಇನ್ನೂ ಮೂವರು ಆರೋಪಿಗಳು ಸೇರಿ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿತ್ತು. ಘಟನೆ ನಡೆದ ಕೆಲ ದಿನಗಳಲ್ಲಿಯೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. 

ಈ ಪೈಕಿ ಪ್ರಮುಖ ಆರೋಪಿಗಳಾದ ನಮ್ರಾಜ್ ಮತ್ತು ಆತನ ಪತ್ನಿ ದಾನ್ ಕಿರಣ್ ಚಿನ್ನಾಭರಣ, ನಗದು ಸಹಿತ ನೇಪಾಳಕ್ಕೆ ಪರಾರಿ ಆಗಿದ್ದರು. ನೇಪಾಳಕ್ಕೆ ತೆರಳಿದ್ದ ವಿಜಯನಗರ ಪೊಲೀಸರು 21 ದಿನ ಹುಡುಕಾಟ ನಡೆಸಿ, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘ಆರೋಪಿಗಳು ನೇಪಾಳದಲ್ಲಿ ಇರುವುದರಿಂದ ನೇರವಾಗಿ ಬಂಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರನ್ನು ಹಸ್ತಾಂತರ ಮಾಡುವಂತೆ ಇಂಟರ್‌ಪೋಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ತನಿಖೆ ಪ್ರಗತಿಯಲ್ಲಿದೆ’ ಎಂದು‌ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಅರಿಹಂತ್ ಜ್ಯೂವೆಲ್ಲರ್ಸ್ ಮಳಿಗೆ ಮಾಲೀಕ ಸುರೇಂದ್ರ ಕುಮಾರ್ ಜೈನ್ ಅವರು ಎರಡು ತಿಂಗಳ ಹಿಂದೆಯೇ ಗುಜರಾತ್‌ಗೆ ತೆರಳುವುದಾಗಿ ಕೆಲಸಗಾರರಿಗೆ ಹೇಳಿದ್ದರು. ಆರೋಪಿಗಳು ಕಳ್ಳತನಕ್ಕೆ ಕಾರ್ಯತಂತ್ರ ರೂಪಿಸಿದ್ದರು. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಆರೋಪಿಗಳನ್ನು ಉದ್ಯೋಗಕ್ಕೆ ಸೇರಿಸುವ ಮುನ್ನ ಆಧಾರ್ ಕಾರ್ಡ್ ಹಾಗೂ ಪೊಲೀಸ್‌ ಪರಿಶೀಲನೆ ನಡೆಸಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಸುರೇಂದ್ರ ಕುಮಾರ್ ಜೈನ್ ಅವರ ಮನೆಯಲ್ಲಿ ನಮ್ರಾಜ್ ಹಾಗೂ ಆತನ ಪತ್ನಿ ಆರು ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದರು. ಉಳಿದುಕೊಳ್ಳಲು ಮನೆ ವ್ಯವಸ್ಥೆ ಇರದ ನಮ್ರಾಜ್ ದಂಪತಿಗೆ ತಮ್ಮದೇ ಮನೆಯಲ್ಲಿ ಸುರೇಂದ್ರ ಅವರು ಒಂದು ಕೊಠಡಿ ನೀಡಿದ್ದರು. ನಮ್ರಾಜ್ ಆಭರಣ ಅಂಗಡಿಯ ಭದ್ರತಾ ಸಿಬ್ಬಂದಿಯಾಗಿರುವುದರ ಜೊತೆಗೆ ಮಾಲೀಕನ ಮನೆಯ ಹೂದೋಟದಲ್ಲಿ ಗಿಡಗಳಿಗೆ ನೀರು ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

ನವೆಂಬರ್ 1ರಂದು ಜಾತ್ರೆಯ ನಿಮಿತ್ತ ಸುರೇಂದ್ರ ಕುಮಾರ್ ಜೈನ್ ಅವರ ಕುಟುಂಬ ಗುಜರಾತ್‌ಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿಕೊಂಡು ನಮ್ರಾಜ್ ಪತ್ನಿಯೊಂದಿಗೆ ಪರಾರಿಯಾಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.