ADVERTISEMENT

ಕಾಯಂ ಮೀಟರ್ ಇಲ್ಲ; ಭಾರಿ ಶುಲ್ಕ ತಪ್ಪುತ್ತಿಲ್ಲ

ನಿಗದಿಗಿಂತ ಮೂರು ಪಟ್ಟು ಹೆಚ್ಚು ಶುಲ್ಕ ಪಾವತಿಸುತ್ತಿರುವ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 21:19 IST
Last Updated 20 ಅಕ್ಟೋಬರ್ 2020, 21:19 IST

ಬೆಂಗಳೂರು: ಮನೆಗಳಿಗೆ ಬೆಸ್ಕಾಂನಿಂದ ಕಾಯಂ ಮೀಟರ್ ಅಳವಡಿಸದೇ ಇರುವುದರಿಂದ, ನಿಗದಿಗಿಂತ ಮೂರು- ನಾಲ್ಕು ಪಟ್ಟು ಹೆಚ್ಚು ವಿದ್ಯುತ್ ಶುಲ್ಕ ಪಾವತಿಸಬೇಕಾಗಿದೆ ಎಂದು ಗ್ರಾಹಕರು ದೂರಿದ್ದಾರೆ.

‘ಕಾಯಂ ಮೀಟರ್ ಬದಲು ತಾತ್ಕಾಲಿಕ‌ ಎಲೆಕ್ಟ್ರಿಕಲ್ಮೀಟರ್ ಅಳವಡಿಸಲಾಗಿದೆ. ಎರಡು ವರ್ಷಗಳಿಂದ ಮನವಿ ಮಾಡಿದರೂ, ಕಾಯಂ ಮೀಟರ್ ಅಳವಡಿಸುತ್ತಿಲ್ಲ’ ಎಂದು ಬೆಟ್ಟದಾಸನಪುರದ ಸಾಯಿಶಕ್ತಿ ಲೇಔಟ್ ನಿವಾಸಿಗಳ ಸಂಘದ ಸದಸ್ಯ ಚಂದ್ರಶೇಖರ ದೂರಿದರು.

‘ತಾತ್ಕಾಲಿಕ ಮೀಟರ್ ಅಳವಡಿಸಿ ರುವುದರಿಂದ ₹300ರಿಂದ‌ ₹400 ಶುಲ್ಕಕ್ಕೆ ಬದಲು, ₹1000ದಿಂದ‌ ₹1,200ವರೆಗೆ ವಿದ್ಯುತ್ ಬಿಲ್ ಬರುತ್ತಿದೆ. ಆರ್ಥಿಕವಾಗಿ ನಮಗೆ‌ ಹೊರೆಯಾಗುತ್ತಿದೆ’ ಎಂದರು.

ADVERTISEMENT

ತಾತ್ಕಾಲಿಕ ಮೀಟರ್ ಆದರೆ, ಒಂದು‌ ಯುನಿಟ್ ಗೆ ₹10 ಇದ್ದರೆ, ಕಾಯಂ ಮೀಟರ್‌ಗಳಿಗೆ ಯುನಿಟ್‌ಗೆ ₹3ರಿಂದ ₹3.50 ಪೈಸೆ ದರ‌ ನಿಗದಿ‌ ಮಾಡಲಾಗಿದೆ.

‘ನಮ್ಮ ಬಡಾವಣೆ ನಿರ್ಮಾಣ ವಾಗಿದ್ದು 2000ರಲ್ಲಿ. 500ಕ್ಕೂ ಹೆಚ್ಚು‌‌ ಮನೆಗಳು ಬಡಾವಣೆಯಲ್ಲಿವೆ. 2017ರಲ್ಲಿ 200 ಮನೆಗಳಿಗೆ ಬೆಸ್ಕಾಂ ಕಾಯಂ ಎಲೆಕ್ಟ್ರಿಕಲ್‌ ಮೀಟರ್ ಅಳವಡಿಸಿತು. ಆದರೆ, 2017ರ ನಂತರ ಉಳಿದ ‌ಮನೆಗಳಿಗೆ ತಾತ್ಕಾಲಿಕ ಮೀಟರ್ ನೀಡಲಾಗುತ್ತಿದೆ’ ಎಂದರು.

‘ತಾತ್ಕಾಲಿಕ ಮೀಟರ್ ಇದ್ದವರು ತಿಂಗಳಿಗೆ ಕನಿಷ್ಠ ₹ 800 ಪಾವತಿಸಲೇಬೇಕು. ಕೆಲವರಿಗಂತೂ ₹8000 ದವರೆಗೆ ಬಿಲ್‌ ಬರುತ್ತಿದೆ’ ಎಂದರು.

‘ಬಿಲ್ ಪಡೆಯಲೂ ನಾವು ಎಲೆಕ್ಟ್ರಿಕಲ್ ಗುತ್ತಿಗೆದಾರರಿಗೆ ಪ್ರತಿ ತಿಂಗಳು ₹200 ಕೊಡಬೇಕು. 28 ದಿನದೊಳಗೆ ಶುಲ್ಕ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸಲಾಗುತ್ತದೆ' ಎಂದು ಮತ್ತೊಬ್ಬ ‌ನಿವಾಸಿ ಹೇಳಿದರು.

‘ನಿಯಮದ‌ ಪ್ರಕಾರ ತಾತ್ಕಾಲಿಕ ಮೀಟರ್ ಅಳವಡಿಸಿದ 6 ತಿಂಗಳೊಳಗೆ ಕಾಯಂ ಮೀಟರ್ ಅಳವಡಿಸಬೇಕು. ಆದರೆ, ಎರಡು ವರ್ಷಗಳಾದರೂ ನಮಗೆ ಈ ಸೌಲಭ್ಯ ನೀಡುತ್ತಿಲ್ಲ’ ಎಂದು ಅವರು ದೂರಿದರು.

'ಅನಧಿಕೃತ ಬಡಾವಣೆಗಳಿಗೆ ಕಾಯಂ‌ ಮೀಟರ್ ಅಳವಡಿಸಬಾರದು ಎಂದು ಸರ್ಕಾರದ ಆದೇಶವೇ ಇದೆ. ಅದರಂತೆ ಸಿಬ್ಬಂದಿ ಕ್ರಮ ಕೈಗೊಂಡಿರುತ್ತಾರೆ. ಸಾಯಿಶಕ್ತಿ ಲೇಔಟ್ ಅನಧಿಕೃತವೋ, ಅಧಿಕೃತವೋ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳ ಲಾಗುವುದು‘ ಎಂದು ಬೆಸ್ಕಾಂನ ವ್ಯವಸ್ಥಾಪಕ‌ ನಿರ್ದೇಶಕ ರಾಜೇಶ್ ಗೌಡ ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.