ADVERTISEMENT

ಮುಗಿಯದ ಕಾಮಗಾರಿ: ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಟವಿಲ್ಲ!

ಕ್ರೀಡಾ ಚಟುವಟಿಕೆಗಳಿಗೆ ಅಡ್ಡಿ l ತಪ್ಪದ ವಾಣಿಜ್ಯ ಚಟುವಟಿಕೆ

ಮಹಮ್ಮದ್ ನೂಮಾನ್
Published 20 ಜನವರಿ 2023, 23:00 IST
Last Updated 20 ಜನವರಿ 2023, 23:00 IST
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾಮಗಾರಿಯ ನೋಟ  - ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾಮಗಾರಿಯ ನೋಟ  - ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಅಂಗಳದ ಒಂದು ಭಾಗದಲ್ಲಿ ರಾಶಿ ಬಿದ್ದಿರುವ ಕಲ್ಲು, ಮಣ್ಣು. ನಿರ್ಮಾಣ ಕಾಮಗಾರಿಗೆ ಅಲ್ಲಲ್ಲಿ ತೋಡಿರುವ ಗುಂಡಿ. ಇನ್ನೊಂದು ಕಡೆ ಒಂದಿಲ್ಲೊಂದು ವಾಣಿಜ್ಯ ಚಟುವಟಿಕೆ. ಇದರ ನಡುವೆ ಖಾಲಿಯಿರುವ ಒಂದಷ್ಟು ಜಾಗದಲ್ಲಿ ಆಟ...

ಬೆಂಗಳೂರಿನ ಇತಿಹಾಸದ ಭಾಗವಾಗಿರುವ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದ ಸದ್ಯದ ಸ್ಥಿತಿಯಿದು. ನವೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಇಲ್ಲಿ ಆಟವಾಡಲು ಬರುವವರಿಗೆ ಕಿರಿಕಿರಿ ಉಂಟಾಗಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಆರಂಭವಾಗಿರುವ ನಿರ್ಮಾಣ ಕಾಮಗಾರಿ 9 ತಿಂಗಳು ಕಳೆದರೂ ಮುಗಿದಿಲ್ಲ. ಕ್ರಿಕೆಟ್‌, ಫುಟ್‌ಬಾಲ್‌ ಒಳಗೊಂಡಂತೆ ವಿವಿಧ ಕ್ರೀಡೆಗೆ ಈ ಮೈದಾನವನ್ನೇ ಅವಲಂಬಿಸಿರುವವರು ಪರಿತಪಿಸುವಂತಾಗಿದೆ.

ADVERTISEMENT

ಕಾಮಗಾರಿಯ ನಡುವೆಯೇ ಮೈದಾನವನ್ನು ಮೇಳಗಳು ಸೇರಿದಂತೆ ವಾಣಿಜ್ಯ ಉದ್ದೇಶಕ್ಕೆ ನೀಡುತ್ತಿರುವುದಕ್ಕೆ ಕ್ರೀಡಾಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾರದ ಹಿಂದೆಯಷ್ಟೇ ಇಲ್ಲಿ ಅವರೆ ಬೇಳೆ ಮೇಳ ಆಯೋಜನೆಯಾಗಿತ್ತು.

ಏನು ಕಾಮಗಾರಿ?: ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ₹ 14 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೈದಾನದ ಸುತ್ತಲೂ ಗ್ಯಾಲರಿ ಹಾಗೂ ಚಾವಣಿ ನಿರ್ಮಾಣ ಮಾಡಲಾಗುತ್ತದೆ. ಚಿಕ್ಕ ವೇದಿಕೆ ಕೂಡಾ ಬರಲಿದೆ.

‘ಕೆಲಸ ಶುರು ಮಾಡಿದ ಬಳಿಕ ಮೇಳಗಳು, ಸಮಾವೇಶ ಸೇರಿದಂತೆ 15 ರಿಂದ 20 ಕಾರ್ಯಕ್ರಮಗಳಿಗೆ ಮೈದಾನವನ್ನು ನೀಡಲಾಗಿದೆ. ಇದರಿಂದ ಕಾಮಗಾರಿ ತಡವಾಗುತ್ತಿದೆ. ಕೆಲಸದ ಗುತ್ತಿಗೆ ವಹಿಸಿಕೊಂಡಿರುವವರೂ ಈ ಬಗ್ಗೆ ದೂರಿದ್ದಾರೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

‘ಚಾವಣಿ ನಿರ್ಮಾಣಕ್ಕಾಗಿ ಕೆಲವು ಮರಗಳ ರೆಂಬೆಗಳನ್ನು ಕತ್ತರಿಸಬೇಕಿತ್ತು. ಅದರ ಒಪ್ಪಿಗೆಗಾಗಿ ಒಂದೂವರೆ ತಿಂಗಳು ಕಾಯಬೇಕಾಯಿತು. ಇದು ಕೂಡಾ ಕಾಮಗಾರಿ ತಡವಾಗಲು ಕಾರಣ’ ಎಂದರು.

ಮೇಳಗಳಿಂದ ಅಡ್ಡಿ: ‘ಕಾಮಗಾರಿಯ ನಡುವೆಯೇ ಮೇಳಗಳಿಗೆ ಅವಕಾಶ ನೀಡಲಾಗುತ್ತಿದೆ. ರಾಜಕಾರಣಿಗಳ ಪ್ರಭಾವ ಬಳಸಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ಪಡೆಯುತ್ತಾರೆ. ಮೇಳಗಳಿಗೆ ಬರುವವರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವರು. ಇದರಿಂದ ಇಲ್ಲಿನ ನಿವಾಸಿಗಳು ಹಾಗೂ ಕಾಮಗಾರಿ ನಡೆಸುವವರಿಗೆ ಅಡ್ಡಿಯಾಗಿದೆ’ ಎಂಬುದು ಸ್ಥಳೀಯ ನಿವಾಸಿ ಹನುಮಂತ ರಾಜೇಂದ್ರ ಅವರ ದೂರು.

‘ಈ ಮೈದಾನವು ಕ್ರೀಡಾ ಚಟುವಟಿಕೆ ಹೊರತುಪಡಿಸಿ ಇತರ ಎಲ್ಲ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಮೇಳಗಳು ನಡೆದರೆ ಅಂಗಳ ಸ್ವಚ್ಛಗೊಳಿಸುವ ಕೆಲಸ ಮಾಡುವುದಿಲ್ಲ. ಸ್ಥಳೀಯ ನಿವಾಸಿಗಳು ಮತ್ತು ಇಲ್ಲಿಗೆ ಆಡಲು ಬರುವವರು ಸ್ವಂತ ಖರ್ಚಿನಿಂದ ಸ್ವಚ್ಛತೆ ನಡೆಸಬೇಕಾಗುತ್ತದೆ’ ಎಂದು ಕದಂಬ ಕ್ರೀಡಾ ಸಂಘದ ಸದಸ್ಯ ರಂಗಸ್ವಾಮಿ ಅಸಮಾಧಾನ ಹೊರಹಾಕಿದರು.

‘ಹೈಕೋರ್ಟ್‌ ಆದೇಶಕ್ಕೆ ಬೆಲೆಯಿಲ್ಲ’
‘ಈ ಮೈದಾನವನ್ನು ತಿಂಗಳಲ್ಲಿ ಐದಕ್ಕಿಂತ ಹೆಚ್ಚು ದಿನ ವಾಣಿಜ್ಯ ಉದ್ದೇಶಕ್ಕೆ ನೀಡುವಂತಿಲ್ಲ ಎಂಬ ಹೈಕೋರ್ಟ್‌ ಆದೇಶ ಇದ್ದರೂ, ಅದು ಪಾಲನೆಯಾಗುತ್ತಿಲ್ಲ’ ಎಂದು ಶಂಕರಪುರಂ ರೆಸಿಡೆಂಟ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ ಖಜಾಂಚಿ ಮಂಜುನಾಥ್‌ ದೂರಿದರು.

‘ವಸ್ತುಪ್ರದರ್ಶನ, ಮೇಳ ನಡೆಸಲು ಐದು ದಿನಗಳಿಗೆ ಅನುಮತಿ ನೀಡುವರಾದರೂ ಮಳಿಗೆ ನಿರ್ಮಾಣ ಮತ್ತು ಅವುಗಳ ತೆರವು ಸೇರಿದಂತೆ 10ಕ್ಕೂ ಅಧಿಕ ದಿನಗಳ ಬೇಕಾಗುತ್ತದೆ’ ಎಂದರು.

‘ಅನ್ಯ ಉದ್ದೇಶಕ್ಕೆ ಅಧಿಕ ಬಳಕೆ’
‘ನ್ಯಾಷನಲ್‌ ಕಾಲೇಜು ಮೈದಾನಕ್ಕೆ ತನ್ನದೇ ಆದ ಇತಿಹಾಸವಿದೆ. ಜಿ.ಆರ್‌.ವಿಶ್ವನಾಥ್‌, ಬಿ.ಎಸ್‌.ಚಂದ್ರಶೇಖರ್‌, ಇಎಎಸ್‌ ಪ್ರಸನ್ನ ಅವರಂತಹ ಶ್ರೇಷ್ಠ ಆಟಗಾರರು ಕ್ರಿಕೆಟ್‌ ಕಲಿತ ಮೈದಾನ ಇದು. ಇಂತಹ ಮೈದಾನ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ಕ್ರೀಡಾಪಟುಗಳಿಗೆ ತೊಂದರೆಯಾಗಿದೆ’ ಎಂದು ಹಿರಿಯ ಕ್ರಿಕೆಟ್‌ ಕೋಚ್‌ ಒಬ್ಬರು ಹೇಳುತ್ತಾರೆ.

**

ಮೈದಾನದಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡದೆ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
–ಮಹಾಂತೇಶ್‌, ಬಿಬಿಎಂಪಿ ದಕ್ಷಿಣ ವಲಯ ಕಾರ್ಯಪಾಲಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.