ನಟಿ ದೀಪಿಕಾ ದಾಸ್ ಮತ್ತು ಅವರ ತಾಯಿ
ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್
ಬೆಂಗಳೂರು: ‘ಯಶವಂತ ಎಂಬಾತ ಮಧ್ಯರಾತ್ರಿ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾನೆ’ ಎಂದು ಕಿರುತೆರೆ ನಟಿ ದೀಪಿಕಾ ದಾಸ್ ತಾಯಿ ಪದ್ಮಲತಾ ಅವರು ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗೆ ಹುಡುಕಾಟ ನಡೆಸಿದ್ದಾರೆ.
‘ಚಲನಚಿತ್ರ ನಟಿಯಾಗಿರುವ ನನ್ನ ಮಗಳು ದೀಪಿಕಾ ದಾಸ್, ಎಂಟು ತಿಂಗಳ ಹಿಂದೆ ದೀಪಕ್ ಕುಮಾರ್ ಎನ್ನುವವರ ಜೊತೆ ವಿವಾಹವಾಗಿದ್ದಾಳೆ. ಮಗಳು ಮತ್ತು ಅಳಿಯ ಒಂದು ತಿಂಗಳ ಹಿಂದೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ಈಗ ಅಪರಿಚಿತ ವ್ಯಕ್ತಿಯೊಬ್ಬ ನನಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಯಾಕೆ ಮದುವೆ ಮಾಡಿದ್ದೀರಿ? ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಜನರಿಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದ. ಹಾಗೇನಾದರೂ ಇದ್ದರೆ ಕಾನೂನು ಪ್ರಕಾರ ದೂರು ನೀಡುವಂತೆ ನಾನು ಹೇಳಿದ್ದೆ’ ಎಂದು ಪದ್ಮಾಲತಾ ದೂರಿನಲ್ಲಿ ತಿಳಿಸಿದ್ದಾರೆ.
‘ಕೆಲ ದಿನಗಳ ನಂತರ ದೀಪಿಕಾಗೆ ಕರೆ ಮಾಡಿದ್ದ ವ್ಯಕ್ತಿ, ನಿಮ್ಮ ಯಾಜಮಾನರು ಮೋಸ ಮಾಡಿದ್ದು ತಿಳಿದಿಲ್ಲವೆ? ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಆಣೆ ಮಾಡಬೇಕು ಎಂದು ಕೇಳಿದ್ದ. ಕಾನೂನು ರೀತಿ ದೂರು ನೀಡುವಂತೆ ಮಗಳೂ ಹೇಳಿದ್ದಳು. ನನಗೆ ಹಣ ನೀಡದೆ ಇದ್ದರೆ ನಿಮ್ಮ ಹೆಸರು ಬರೆದು ಅತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಸಿದ್ದ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ನನ್ನ ಮಗಳು ಮತ್ತು ಅಳಿಯನ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾನೆ. ಪದೇ ಪದೇ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟು, ಸಾಯುವುದಾಗಿ ಬೆದರಿಕೆ ಇಟ್ಟಿದ್ದಾನೆ. ಬೆದರಿಕೆ ಹಾಕುತ್ತಿರುವ ಯಶವಂತ ಎಂಬಾತನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.