ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ನಗರದ ಹಲವು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಎಂಬಿಎ ಪದವೀಧರ ಸೇರಿದಂತೆ ಮೂವರನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಹೈದರಾಬಾದ್‌ನ ಮೊಹಮ್ಮದ್ ಅವೇಜ್ (42), ಶೇಕ್ ಅಬು ತಾಲಿಬ್ (22) ಮತ್ತು ಅಬ್ದುಲ್ ರಿಯಾಜ್ (22) ಬಂಧಿತರು. ಇವರಿಂದ 50 ಗ್ರಾಂ ಚಿನ್ನಾಭರಣ, 157 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಎಂಬಿಎ ಪದವೀಧರನಾದ ಅವೇಜ್, ಇತರೆ ಆರೋಪಿಗಳ ಜೊತೆ ಸೇರಿ ಕಳ್ಳತನಕ್ಕೆ ತಂಡ ಕಟ್ಟಿದ್ದ. ಎಲ್ಲ ಆರೋಪಿಗಳು, ಹೈದರಾಬಾದ್‌ನಿಂದ ಕಾರಿನಲ್ಲಿ ಆಗಾಗ ಬೆಂಗಳೂರಿಗೆ ಬರುತ್ತಿದ್ದರು. ವಸತಿ ಪ್ರದೇಶದ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿ, ಸುತ್ತಾಡುತ್ತಿದ್ದರು. ಬೀಗ ಹಾಕಿರುತ್ತಿದ್ದ, ಅಂಗಳದಲ್ಲಿ ಕಸ ಬಿದ್ದಿರುತ್ತಿದ್ದ ಹಾಗೂ ರಂಗೊಲಿ ಹಾಕಿರದ ಮನೆಗಳನ್ನು ಗುರುತಿಸುತ್ತಿದ್ದರು.’
‘ರಾತ್ರಿ ಮನೆಗಳಿಗೆ ನುಗ್ಗುತ್ತಿದ್ದ ಆರೋಪಿಗಳು, ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಇತ್ತೀಚೆಗೆ ಮಾರುತಿನಗರದಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಆರೋಪಿಗಳ ಕೃತ್ಯ ಸೆರೆಯಾಗಿತ್ತು. ಅದನ್ನು ಆಧರಿಸಿ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಕಳ್ಳತನದಿಂದ ಬಂದ ಹಣವನ್ನು ಆರೋಪಿಗಳು ಮೋಜು–ಮಸ್ತಿಗೆ ಖರ್ಚು ಮಾಡುತ್ತಿದ್ದರು. ಹಣ ಖಾಲಿಯಾಗುತ್ತಿದ್ದಂತೆ ಪುನಃ ಕಳ್ಳತನಕ್ಕೆ ಇಳಿಯುತ್ತಿದ್ದರು. ಆರೋಪಿಗಳ ವಿರುದ್ಧ ಕರ್ನಾಟಕ ಹಾಗೂ ಆಂಧ್ರಪ್ರದೇಶ ವಿವಿಧ ಠಾಣೆಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.