ADVERTISEMENT

ತಿರುಪತಿ | ಧ್ಯಾನಮಂದಿರ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಿ: TTD ಅಧ್ಯಕ್ಷರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 15:55 IST
Last Updated 14 ಜೂನ್ 2025, 15:55 IST
ತಿರುಮಲದಲ್ಲಿ ವೆಂಕಟೇಶ್ವಸ್ವಾಮಿ ಧ್ಯಾನ ಮಂದಿರ ನಿರ್ಮಿಸಲು ಸ್ಥಳಾವಕಾಶ ನೀಡುವಂತೆ ಎಂ.ಆರ್. ಜಯರಾಮ್ ಅವರು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರಿಗೆ ಮನವಿ ಸಲ್ಲಿಸಿದರು. ಎಂ.ಆರ್. ಸೀತಾರಾಮ್, ತಾರಾ ಅನುರಾಧ ಉಪಸ್ಥಿತರಿದ್ದಾರೆ 
ತಿರುಮಲದಲ್ಲಿ ವೆಂಕಟೇಶ್ವಸ್ವಾಮಿ ಧ್ಯಾನ ಮಂದಿರ ನಿರ್ಮಿಸಲು ಸ್ಥಳಾವಕಾಶ ನೀಡುವಂತೆ ಎಂ.ಆರ್. ಜಯರಾಮ್ ಅವರು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರಿಗೆ ಮನವಿ ಸಲ್ಲಿಸಿದರು. ಎಂ.ಆರ್. ಸೀತಾರಾಮ್, ತಾರಾ ಅನುರಾಧ ಉಪಸ್ಥಿತರಿದ್ದಾರೆ    

ಬೆಂಗಳೂರು: ಆಂಧ್ರ‍ಪ್ರದೇಶದ ತಿರುಪತಿಯ ತಿರುಮಲದಲ್ಲಿ ವೆಂಕಟೇಶ್ವಸ್ವಾಮಿ ಧ್ಯಾನ ಮಂದಿರವನ್ನು ನಿರ್ಮಿಸಲು ಸ್ಥಳಾವಕಾಶ ನೀಡಬೇಕು ಎಂದು ಕರ್ನಾಟಕ ಪ್ರದೇಶ ಬಲಿಜ ಸಂಘ ಹಾಗೂ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್. ಜಯರಾಮ್ ಅವರು ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರಿಗೆ ಮನವಿ ಸಲ್ಲಿಸಿದರು. 

ನಂತರ ಮಾತನಾಡಿದ ಎಂ.ಆರ್. ಜಯರಾಮ್, ‘‌ಕೈವಾರದ ಸಂತ ಶ್ರೀಯೋಗಿನಾರೇಯಣ ತಾತಯ್ಯನವರು ತಿರುಮಲದ ವೆಂಕಟೇಶ್ವರಸ್ವಾಮಿಯ ಬಗ್ಗೆ ಹಲವಾರು ಕೀರ್ತನೆಗಳನ್ನು ರಚಿಸಿ, ಸ್ತುತಿಸಿದ್ದಾರೆ. ಮಾನಸ ಪೂಜೆಯಲ್ಲಿ ಪ್ರಥಮವಾಗಿ ವೆಂಕಟೇಶ್ವರಸ್ವಾಮಿಯನ್ನು ಆರಾಧಿಸಿದ್ದಾರೆ. ತಾತಯ್ಯನವರು ಯೋಗಸೂತ್ರದಲ್ಲಿ ವೆಂಕಟೇಶ್ವರಸ್ವಾಮಿ ಕುರಿತು ವರ್ಣನೆ ಮಾಡಿದ್ದಾರೆ. ಕೈವಾರಕ್ಕೂ ಹಾಗೂ ತಿರುಪತಿಗೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ ತಿರುಮಲದಲ್ಲಿ ವೆಂಕಟೇಶ್ವರಸ್ವಾಮಿ ಧ್ಯಾನಮಂದಿರ ನಿರ್ಮಿಸಲು ಸ್ಥಳಾವಕಾಶವನ್ನು ನೀಡಬೇಕು’ ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು, ‘ನಾನು ಟಿಟಿಡಿ ಅಧ್ಯಕ್ಷನಾದ ಮೇಲೆ ಹಲವಾರು ಸುಧಾರಣೆಗಳನ್ನು ತಂದಿದ್ದೇನೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ಭಕ್ತರಿಗೆ ಇನ್ನೂ ಹೆಚ್ಚಿನ ಸಹಾಯವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ವೆಂಕಟೇಶ್ವರಸ್ವಾಮಿಯ ದರ್ಶನಕ್ಕೆ ಭಕ್ತರಿಗೆ ಹೆಚ್ಚು ಸಮಯ ತೆಗೆದುಕೊಳ್ಳದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ತಿರುಮಲದಲ್ಲಿ ವೆಂಕಟೇಶ್ವರಸ್ವಾಮಿ ಧ್ಯಾನ ಮಂದಿರ ನಿರ್ಮಾಣ ಮಾಡಲು ನೀಡಿರುವ ಮನವಿಯನ್ನು ಪರಿಶೀಲಿಸಿ, ಟ್ರಸ್ಟ್‌ನಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.  

ADVERTISEMENT

ಮಾಜಿ ಸಚಿವ ಎಂ.ಆರ್. ಸೀತಾರಾಮ್, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಎಂ.ಆರ್. ಶ್ರೀನಿವಾಸಮೂರ್ತಿ, ಬಿ.ಎನ್. ಕೃಷ್ಣಯ್ಯ, ಐಎಸ್‌ಎಫ್‌ ಮನೋಜ್‌ಕುಮಾರ್, ಟಿಟಿಡಿ ಸದಸ್ಯರಾದ ನರೇಶ್, ಶಾಂತಾರಾಮ್, ಮಾಜಿ ಶಾಸಕ ಎ. ನಾಗರಾಜ್, ನಟಿ ತಾರಾ ಅನುರಾಧ, ಮಾಜಿ ಮೇಯರ್ ಪದ್ಮಾವತಿ, ಬಲಿಜ ಸಂಘದ ಅಧ್ಯಕ್ಷ ಪೆರಿಕಲ್ ಸುಂದರ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.