ಕೆ.ಆರ್.ಪುರ: ‘ಕೆ.ಆರ್.ಪುರ ಮಾರುಕಟ್ಟೆಗೆ ಕಾನೂನು ಬದ್ದವಾಗಿ ಟೆಂಡರ್ ಪಡೆದು ಸುಂಕ ವಸೂಲು ಮಾಡುತ್ತಿದ್ದರೂ ಕೆಲವರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ’ ಎಂದು ಗುತ್ತಿಗೆದಾರ ಅಂಜನ್ ಮೂರ್ತಿ ಅವರು ವ್ಯಾಪಾರಿಗಳು, ಆಟೊ ಚಾಲಕರೊಂದಿಗೆ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
‘ಬಿಬಿಎಂಪಿ ವ್ಯಾಪ್ತಿಯ ಕೆ.ಆರ್.ಪುರ ಮಾರುಕಟ್ಟೆಗೆ 1 ಎಕರೆ 14 ಗುಂಟೆಗೆ ಟೆಂಡರ್ ಕರೆಯಲಾಗಿತ್ತು. ಈ ವೇಳೆ ₹9.81 ಲಕ್ಷಕ್ಕೆ ಟೆಂಡರ್ ನನ್ನ ಪಾಲಾಗಿರುತ್ತದೆ. ಮುಂಗಡವಾಗಿ ಮೂರು ತಿಂಗಳ ಹಣವನ್ನು ಠೇವಣಿಯಾಗಿ ಪಾಲಿಕೆಗೆ ಪಾವತಿಸಿ ಕಾನೂನು ರೀತಿಯಲ್ಲಿ ನಿಯಮಾನುಸಾರ ಸುಂಕ ವಸೂಲಿ ಮಾಡುತ್ತಿದ್ದೇನೆ. ಇದನ್ನು ಸಹಿಸದ, ಈ ಹಿಂದೆ ಟೆಂಡರ್ ಪಡೆದಿದ್ದ ಎಲೆ ಶ್ರೀನಿವಾಸ್ ಮತ್ತು ಆತನ ಸಂಗಡಿಗರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ವ್ಯಾಪರಿಗಳ ಮೇಲೆ ನಿಗಾ ಇಡಲು ಪಾಲಿಕೆ ಮತ್ತು ಪೋಲಿಸ್ ಅಧಿಕಾರಿಗಳ ಅನುಮತಿಯಿಲ್ಲದೆ ರಸ್ತೆಗಳಲ್ಲಿ ಅಕ್ರಮವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ತೆರವುಗೊಳಿಸಿ ನ್ಯಾಯ ಒದಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಪಾಲಿಕೆ ಮತ್ತು ಪೋಲಿಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಐಟಿಐನಿಂದ ವೆಂಗಯ್ಯನಕೆರೆವರೆಗಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಎರಡು ಬದಿಯ ವ್ಯಾಪಾರಿಗಳಿಗೆ 1 ಎಕರೆ 14 ಗುಂಟೆ ಜಾಗದಲ್ಲಿ ವ್ಯಾಪಾರ ನಡೆಸುವ ವ್ಯವಸ್ಥೆ ಮಾಡಬೇಕು. ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಟೆಂಡರ್ ರದ್ದುಪಡಿಸಿ ಮುಂಗಡ ಹಣ ವಾಪಸು ನೀಡಬೇಕು’ ಎಂದರು.
ವ್ಯಾಪಾರಿಗಳಾದ ಅಸ್ಲಂಬಾಬು, ಅಂಬರೀಶ್, ನಟರಾಜ್, ಕೇಶವ್, ಅಂಜನ್ ಕುಮಾರ್, ಆಟೊ ಘಟಕದ ಮುನಿಕೃಷ್ಣ, ಆನಂದ್ ರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.