
ಬೆಂಗಳೂರು: ನಗರದಲ್ಲಿ 15 ದಿನದಿಂದ ತೀವ್ರ ದರ ಕುಸಿತ ಕಂಡಿದ್ದ ಟೊಮೆಟೊದ ಬೆಲೆ ಮತ್ತೆ ಏರಿಕೆಯಾಗಿದೆ. ಪ್ರತಿ ಕೆ.ಜಿಗೆ ₹20ರಿಂದ ₹30ರಂತೆ ಮಾರಾಟವಾಗುತ್ತಿದ್ದ ಟೊಮೆಟೊ, ಈಗ ಕೆ.ಜಿ.ಗೆ ₹80ರಂತೆ ಮಾರಾಟವಾಗುತ್ತಿದೆ. ಟೊಮೆಟೊ ಬೆಳೆಯ ಇಳುವರಿ ಕುಂಠಿತಗೊಂಡಿದ್ದು, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ಆದ್ದರಿಂದ ದರ ಹೆಚ್ಚಳಗೊಂಡಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆ.ಜಿಗೆ ₹60ಕ್ಕೆ ದರವಿದ್ದರೆ, ಇತರೆ ಪ್ರದೇಶಗಳಲ್ಲಿ ₹80ರಂತೆ ಮಾರಾಟ ಮಾಡಲಾಗುತ್ತಿದೆ.
‘ಮೂರು ನಾಲ್ಕು ದಿನಗಳಿಂದ ಸತತವಾಗಿ ಬೆಲೆ ಏರುತ್ತಲೇ ಸಾಗಿದೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರ ದಿಂದ ಟೊಮೊಟೊ ನಗರಕ್ಕೆ ಬರುತ್ತದೆ. ಕಳೆದ ಮೂರು ನಾಲ್ಕು ದಿನಗಳಲ್ಲಿ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚುವುದರ ಜೊತೆಗೆ ದರವು ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಅಕ್ರಮ್ ತಿಳಿಸಿದರು.
‘ಹೂಕೋಸು ₹80, ಮೆಣಸಿನಕಾಯಿ ₹70, ಬೆಂಡೆಕಾಯಿ ಬದನೆಕಾಯಿ ಹಾಗೂ ಕ್ಯಾರೆಟ್ ಒಂದು ಕೆ.ಜಿಗೆ ₹60ರಂತೆ ಮಾರಾಟವಾಗುತ್ತದೆ’ ಎಂದರು.
‘ನಗರದ ಬಿನಿಮಿಲ್ಸ್ ಎಪಿಎಂಸಿಗೆ ಬುಧವಾರ 417 ಕ್ವಿಂಟಲ್ ಟೊಮೆಟೊ ಪೂರೈಕೆಯಾಗಿದೆ. ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹5 ಸಾವಿರ, ಗರಿಷ್ಠ ₹5,400ರಂತೆ ಮಾರಾಟವಾಗಿದೆ’ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.