
ಸಾಂಕೇತಿಕ ಚಿತ್ರ
ಬೆಂಗಳೂರು: ನಗರ ಸಂಚಾರ ವಿಭಾಗದ ಪೊಲೀಸರು, 2025ರಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ₹251.26 ಕೋಟಿ ದಂಡ ಸಂಗ್ರಹಿಸಿದ್ದಾರೆ. ಇದು ಕಳೆದ ಒಂದು ದಶಕದಲ್ಲಿ ಅತ್ಯಧಿಕವಾಗಿದೆ. 2024ರಲ್ಲಿ ಸಂಗ್ರಹಿಸಿದ್ದ ₹62.82 ಕೋಟಿಗಿಂತ ಶೇಕಡ 300ರಷ್ಟು ಹೆಚ್ಚಾಗಿದೆ.
ಕಳೆದ 10 ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ದಂಡ ಸಂಗ್ರಹವು ಏರಿಕೆ ಕಂಡಿದೆ.
2014ರಿಂದ 2016ರ ನಡುವೆ ₹65 ಕೋಟಿಯಿಂದ ₹70 ಕೋಟಿ ದಂಡ ಸಂಗ್ರಹಿಸಲಾಗಿತ್ತು. 2017ರಲ್ಲಿ ನಗರದ ಸಿಗ್ನಲ್‌ಗಳಲ್ಲಿ ಸ್ವಯಂಚಾಲಿತ ಕ್ಯಾಮೆರಾಗಳ ಅಳವಡಿಕೆಯಿಂದ ₹ 112.41 ಕೋಟಿ ದಂಡ ಸಂಗ್ರಹವಾಗಿತ್ತು. ಕೋವಿಡ್ ಕಾಲದಲ್ಲೂ ದಂಡ ಸಂಗ್ರಹ ಹೆಚ್ಚಳವಾಗಿತ್ತು. 2023ರಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಬಾಕಿ ಇರುವ ಪ್ರಕರಣಗಳಿಗೆ ಶೇ 50 ರಿಯಾಯಿತಿ ನೀಡಿದ ಕಾರಣ ₹185.13 ಕೋಟಿ ಸಂಗ್ರಹವಾಗಿತ್ತು.
‘2024ರಲ್ಲಿ ಸಂಪರ್ಕರಹಿತ ಸಂಚಾರ ಉಲ್ಲಂಘನೆ ಪ್ರಕರಣಗಳ ಕಡೆಗೆ ಹೆಚ್ಚು ಗಮನ ಹರಿಸಿದ ಕಾರಣ ಹಳೆಯ ಪ್ರಕರಣಗಳ ಬಾಕಿ ವಸೂಲಿ ಕಡಿಮೆಯಾಗಿತ್ತು. ಇದರಿಂದ ₹62.82 ಕೋಟಿ ದಂಡ ಮಾತ್ರ ಸಂಗ್ರಹಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆ. 2025ರಲ್ಲಿ ಸಂಚಾರ ದಟ್ಟಣೆ, ಜಾಗೃತಿ ಹಾಗೂ ಪರಿಣಾಮಕಾರಿ ನೀತಿಗಳನ್ನು ಜಾರಿಗೊಳಿಸಿದ ಪರಿಣಾಮ ₹251.26 ಕೋಟಿ ದಂಡ ಸಂಗ್ರಹಿಸಲಾಗಿದೆ’ ಎಂದು ಬೆಂಗಳೂರು ಸಂಚಾರ ವಿಭಾಗದ ಪೊಲೀಸರ ಅಂಕಿ–ಅಂಶಗಳಿಂದ ತಿಳಿದು ಬಂದಿದೆ.
2025ರ ಆಗಸ್ಟ್ 23ರಿಂದ ಸೆಪ್ಟೆಂಬರ್ 14ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದ ಬಾಕಿ ಇರುವ ಪ್ರಕರಣಗಳಿಗೆ ಶೇ 50 ರಿಯಾಯಿತಿ ನೀಡಿದ ಕಾರಣ ಒಟ್ಟು 3.86 ಲಕ್ಷ ಪ್ರಕರಣಗಳಲ್ಲಿ ₹106 ಕೋಟಿ ದಂಡ ಸಂಗ್ರಹಿಸಲಾಗಿತ್ತು. ನವೆಂಬರ್‌ನಲ್ಲಿ ಮತ್ತೆ ನಡೆದ ಅಭಿಯಾನದಲ್ಲಿ 2.47 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ, ₹7.02 ಕೋಟಿ ದಂಡ ಸಂಗ್ರಹ ಮಾಡಲಾಗಿದೆ.
‘2025ರ ಅಕ್ಟೋಬರ್‌ವರೆಗೆ ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 51.8 ಲಕ್ಷ ಪ್ರಕರಣಗಳಲ್ಲಿ ₹207.35 ಕೋಟಿ ದಂಡ ಸಂಗ್ರಹಿಸಲಾಗಿದೆ. ಇದೊಂದು ದಾಖಲೆಯಾಗಿದೆ’ ಎಂದು ಜಂಟಿ ಪೊಲೀಸ್ ಕಮಿಷನರ್ (ಸಂಚಾರ ವಿಭಾಗ) ಕಾರ್ತಿಕ್ ರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.