ADVERTISEMENT

ಟ್ರಾಫಿಕ್ ಜಾಮ್ ಆಗಿದ್ದಕ್ಕೆ ರೋಗಿ‌ ಜೀವ‌ ಉಳಿಸಲು 3 ಕಿಮೀ ಓಡಿದ ಬೆಂಗಳೂರು ವೈದ್ಯ!

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 5:52 IST
Last Updated 12 ಸೆಪ್ಟೆಂಬರ್ 2022, 5:52 IST
ವೈದ್ಯ ಡಾ. ಗೋವಿಂದ ನಂದಕುಮಾರ್
ವೈದ್ಯ ಡಾ. ಗೋವಿಂದ ನಂದಕುಮಾರ್   

ಬೆಂಗಳೂರು: ನಗರದ ಸರ್ಜಾಪುರ- ಮಾರತ್ತಹಳ್ಳಿ ರಸ್ತೆಯಲ್ಲಿ ಉಂಟಾಗಿದ್ದ ವಿಪರೀತ ದಟ್ಟಣೆಯಲ್ಲಿ ಸಿಲುಕಿದ್ದ ವೈದ್ಯರೊಬ್ಬರು, ರೋಗಿನ ಜೀವ ಉಳಿಸಲು ಕಾರಿನಿಂದ ಇಳಿದು ತಮ್ಮ ಆಸ್ಪತ್ರೆಯವರೆಗೂ 3 ಕಿ.ಮೀ.ವರೆಗೆ ಓಡಿ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಸರ್ಜಾಪುರದ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ. ಗೋವಿಂದ ನಂದಕುಮಾರ್ ಅವರ ಕೆಲಸಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ‌ ಮೆಚ್ಚುಗೆ ವ್ತಕ್ತವಾಗಿದೆ. ಜೊತೆಗೆ, ಬೆಂಗಳೂರಿನ ಸಂಚಾರ ದಟ್ಟಣೆಗೂ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ. ಗೋವಿಂದ ನಂದಕುಮಾರ್ ಅವರು ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲು‌ ಮನೆಯಿಂದ ತಮ್ಮ ಕಾರಿನಲ್ಲಿ ಸರ್ಜಾಪುರದಲ್ಲಿರುವ ಆಸ್ಪತ್ರೆಗೆ ಹೊರಟಿದ್ದರು. ಮಾರತ್ತಹಳ್ಳಿಯ ರಸ್ತೆಯಲ್ಲಿ ಉಂಟಾಗಿದ್ದ ದಟ್ಟಣೆಯಲ್ಲಿ‌ ಕಾರು ಸಿಲುಕಿತ್ತು. 10 ನಿಮಿಷ ಕಾರು‌ ಮುಂದಕ್ಕೆ ಹೋಗಲು‌ ಸಾಧ್ಯವಾಗಿರಲಿಲ್ಲ. ಆಸ್ಪತ್ರೆ ತಲುಪಲು‌ 40 ನಿಮಿಷ ಬೇಕಾಗಬಹುದು ಎಂದು ಗೂಗಲ್‌ ಮ್ಯಾಪ್ ತೋರಿಸಿತ್ತು. ಸಾಮಾನ್ಯವಾಗಿ ಅಲ್ಲಿಂದ ಆ ರಸ್ತೆಯಲ್ಲಿ ಆಸ್ಪತ್ರೆ ತಲುಪಲು 5 ರಿಂದ 10 ನಿಮಿಷ ಬೇಕಾಗಿತ್ತು.

ADVERTISEMENT

ರೋಗಿಯ ಜೀವ ಉಳಿಸಲು ಹೊರಟಿದ್ದ ವೈದ್ಯ ಡಾ. ಗೋವಿಂದ ನಂದಕುಮಾರ್ ಅವರು ಆತಂಕಗೊಂಡಿದ್ದರು. ಅವಾಗಲೇ ರಸ್ತೆ ಪಕ್ಕದಲ್ಲಿ ಕಾರು‌ ನಿಲ್ಲಿಸಿದ್ದ ಅವರು, ಕಾರಿನಿಂದ ಇಳಿದು ಆಸ್ಪತ್ರೆಯತ್ತ ಓಡಲಾರಂಭಿಸಿದರು. ನಂತರ, ಕೆಲ ನಿಮಿಷಗಳಲ್ಲಿ ಆಸ್ಪತ್ರೆ ತಲುಪಿ ರೋಗಿಗೆ ಶಸ್ತ್ರಚಿಕಿತ್ಸೆ ‌ಮಾಡಿ‌ ಜೀವ ಉಳಿಸಿದ್ದಾರೆ.

ವೈದ್ಯ ರಸ್ತೆಯಲ್ಲಿ ಓಡುತ್ತಿದ್ದ ದೃಶ್ಯ‌ವನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಇದು ಸಾಮಾಜಿಕ‌ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.