ADVERTISEMENT

ಅರ್ಧ ಹೆಲ್ಮೆಟ್: ‍ಪೊಲೀಸರಿಗೆ ದಂಡ

ಐಎಸ್‌ಐ ಗುರುತಿನ ಹೆಲ್ಮೆಟ್‌ ಕಡ್ಡಾಯ ಮಾಡಲು ತಯಾರಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 19:18 IST
Last Updated 22 ಅಕ್ಟೋಬರ್ 2022, 19:18 IST
ಅರ್ಧ ಹೆಲ್ಮೆಟ್‌ ಧರಿಸಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಪೊಲೀಸ್‌ ಸಿಬ್ಬಂದಿಗೆ ದಂಡ ವಿಧಿಸಿದ ಆರ್‌.ಟಿ. ನಗರ ಸಂಚಾರ ಪೊಲೀಸರು ರಶೀದಿ ನೀಡಿದರು
ಅರ್ಧ ಹೆಲ್ಮೆಟ್‌ ಧರಿಸಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಪೊಲೀಸ್‌ ಸಿಬ್ಬಂದಿಗೆ ದಂಡ ವಿಧಿಸಿದ ಆರ್‌.ಟಿ. ನಗರ ಸಂಚಾರ ಪೊಲೀಸರು ರಶೀದಿ ನೀಡಿದರು   

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ತೆರಳುವಾಗ ಐಎಸ್‌ಐ ಗುರುತಿನ ಹೆಲ್ಮೆಟ್‌ ಧರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸಂಚಾರ ಪೊಲೀಸರು, ನಿಷೇಧಿತ ಅರ್ಧ ಹೆಲ್ಮೆಟ್ ಧರಿಸುವ ತಮ್ಮ ಸಿಬ್ಬಂದಿಗೆ ಪ್ರಾಯೋಗಿಕವಾಗಿ ದಂಡ ವಿಧಿಸುತ್ತಿದ್ದಾರೆ.

ನಗರದಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಜತೆಗೆ, ಬಹುಪಾಲು ಸವಾರರು ಸುರಕ್ಷಿತ ಹೆಲ್ಮೆಟ್‌ ಧರಿಸದಿರುವುದು ಕಂಡುಬರುತ್ತಿದೆ. ಇದೇ ಕಾರಣಕ್ಕೆ ಐಎಸ್‌ಐ ಗುರುತಿನ ಹೆಲ್ಮೆಟ್‌ ಕಡ್ಡಾಯ ಮಾಡಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ.

‘ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಅರ್ಧ ಹೆಲ್ಮೆಟ್‌ಗಳನ್ನು ಏಕಾಏಕಿ ನಿಷೇಧಿಸಿದರೆ, ಜನರಿಗೆ ತೊಂದರೆ ಆಗುತ್ತದೆ. ಹೀಗಾಗಿ, ಅರ್ಧ ಹೆಲ್ಮೆಟ್ ಧರಿಸದಂತೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಕಾನೂನು ರಕ್ಷಿಸುವ ಪೊಲೀಸರು, ಮೊದಲಿಗೆ ಕಾನೂನು ಪಾಲಿಸಬೇಕು. ಹೀಗಾಗಿ, ಅವರೆಲ್ಲರಿಗೂ ಐಎಸ್‌ಐ ಗುರುತಿನ ಹೆಲ್ಮೆಟ್ ಧರಿಸುವಂತೆ ಸೂಚನೆ ನೀಡಲಾಗಿದೆ. ಅರ್ಧ ಹೆಲ್ಮೆಟ್ ಅಥವಾ ಐಎಸ್‌ಐ ಗುರುತು ಇಲ್ಲದ ಹೆಲ್ಮೆಟ್‌ ಧರಿಸಿ ಸಿಕ್ಕಿಬೀಳುವ ಪೊಲೀಸರಿಗೆ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಿದೆ’ ಎಂದು ತಿಳಿಸಿದರು.

‘ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರಿಗೆ ದಂಡ ವಿಧಿಸಲಾಗಿದೆ. ಇದು ಪ್ರಾಯೋಗಿಕ ಮಾತ್ರ. ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೂ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ, ಜನರು ಎಚ್ಚೆತ್ತುಕೊಂಡು ಐಎಸ್‌ಐ ಗುರುತಿನ ಹೆಲ್ಮೆಟ್ ಧರಿಸಬೇಕು’ ಎಂದು ಅಧಿಕಾರಿ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.