ADVERTISEMENT

ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐದು ತಿಂಗಳಲ್ಲಿ ₹52 ಕೋಟಿ ದಂಡ!

ಐದು ತಿಂಗಳಲ್ಲಿ 23.68 ಲಕ್ಷ ಪ್ರಕರಣ ದಾಖಲು

ಖಲೀಲ ಅಹ್ಮದ ಶೇಖ
Published 19 ಜೂನ್ 2025, 23:55 IST
Last Updated 19 ಜೂನ್ 2025, 23:55 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಐದು ತಿಂಗಳಲ್ಲಿ 23.68 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹52.62 ಕೋಟಿ ದಂಡ ವಿಧಿಸಲಾಗಿದೆ.

‘ಸಿಲಿಕಾನ್‌ ಸಿಟಿ’ಯಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಜೊತೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹಾಗೂ ದಂಡ ವಿಧಿಸುವ ಪ್ರಮಾಣದಲ್ಲೂ ಏರಿಕೆ ಕಂಡು ಬಂದಿದೆ. ನಗರದಲ್ಲಿ ಸಂಚಾರ ನಿರ್ವಹಣೆಯ ಹೊಣೆ ಹೊತ್ತಿರುವ ಸಂಚಾರ ವಿಭಾಗದ ಪೊಲೀಸರು, ಪರಿಸ್ಥಿತಿಯನ್ನು ನಿಭಾಯಿಸಲು ನಿತ್ಯವೂ ಹೆಣಗಾಡುತ್ತಿದ್ದಾರೆ.

2024ರ ಜನವರಿಯಿಂದ ಮೇ ವರೆಗೆ ಒಟ್ಟು 39.10 ಲಕ್ಷ ಪ್ರಕರಣಗಳು ದಾಖಲಾಗಿದ್ದವು. 2025ರ ಜನವರಿಯಿಂದ ಮೇವರೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಈ ಅವಧಿಯಲ್ಲಿ ದಂಡದ ರೂಪದಲ್ಲಿ ಸಂಗ್ರಹಿಸಿದ ಮೊತ್ತ ಹೆಚ್ಚಾಗಿದೆ. ದಂಡದ ಪ್ರಮಾಣ ಹೆಚ್ಚಾಗಿರುವುದು ಇದಕ್ಕೆ ಕಾರಣ.

ADVERTISEMENT

‘ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಧರಿಸದಿರುವುದು, ಸಿಗ್ನಲ್‌ ಜಂಪ್‌, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ, ನಿರ್ಲಕ್ಷ್ಯದ ಚಾಲನೆ, ಅಡ್ಡಾದಿಡ್ಡಿ ಚಾಲನೆ, ಸಾರ್ವಜನಿಕ ಸೇವೆ ಒದಗಿಸುವ ವಾಹನ ಚಾಲಕರು ಸಮವಸ್ತ್ರ ಧರಿಸದಿರುವುದು, ವಿಮೆ ಮಾಡಿಸದಿರುವುದು, ವಾಹನಗಳ ನೋಂದಣಿ ಪತ್ರ ಹೊಂದಿಲ್ಲದಿರುವುದು, ಚಾಲನಾ ಪರವಾನಗಿ ಇಲ್ಲದಿರುವುದು, ಪಾದಚಾರಿ ಮಾರ್ಗದಲ್ಲಿ ವಾಹನಗಳ ನಿಲುಗಡೆ ಮಾಡುವುದು ಸೇರಿದಂತೆ ಮೋಟಾರು ವಾಹನಗಳ ಕಾಯ್ದೆ ವ್ಯಾಪ್ತಿಗೆ ಬರುವ ಉಲ್ಲಂಘನೆ ಪ್ರಕರಣಗಳು ಅಧಿಕವಾಗಿವೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಸಂಚಾರ ನಿಯಮ ಉಲ್ಲಂಘನೆ ಮಾಡುವುದರಿಂದ ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆ, ಕಾಲೇಜು, ಕಚೇರಿ, ಬಡಾವಣೆಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು. 

‘ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ನಗರದ ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವು ಕ್ಲಿಕ್ಕಿಸುವ ಫೋಟೊ ಆಧರಿಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಹಲವರ ಮೊಬೈಲ್‌ಗೆ ಸಂದೇಶ ಕಳುಹಿಸಿ, ದಂಡ ಪಾವತಿಸುವಂತೆ ಸೂಚನೆ ನೀಡಲಾಗುತ್ತಿದೆ. ಸಂಚಾರ ನಿಯಮ ಉಲ್ಲಂಘಿಸಿದರೂ ದಂಡ ಪಾವತಿಸದಿರುವವರನ್ನು ಪತ್ತೆ ಹಚ್ಚಿ, ಅವರ ಮನೆಗೆ ಹೋಗಿ ದಂಡ ವಸೂಲಿ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.