ADVERTISEMENT

ರಕ್ತಚಂದನ ಸಾಗಣೆ: ಸಿಕ್ಕಿಬಿದ್ದ ಕೊಲೆ ಆರೋಪಿ

ಅಕ್ರಮ ಸಾಗಣೆ; ಮಹಿಳೆ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 22:11 IST
Last Updated 30 ನವೆಂಬರ್ 2020, 22:11 IST
ರಕ್ತ ಚಂದನದ ಜೊತೆ ಆರೋಪಿಗಳು
ರಕ್ತ ಚಂದನದ ಜೊತೆ ಆರೋಪಿಗಳು   

ಬೆಂಗಳೂರು: ಮೂರು ವರ್ಷಗಳ ಹಿಂದೆ ನೂರ್ ಎಂಬುವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸುಹೇಲ್‌ ಖಾನ್‌ (22) ಎಂಬುವರು, ರಕ್ತಚಂದನ ಅಕ್ರಮ ಸಾಗಣೆ ಪ್ರಕರಣದಲ್ಲಿ ಆರ್‌.ಟಿ.ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

‘ರಕ್ತಚಂದನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿ ಕೆ.ಜಿ.ಹಳ್ಳಿ ಕಾವೇರಿ ನಗರದ ಸುಹೇಲ್‌ಖಾನ್, ಎಚ್‌.ಎಂ.ಟಿ ಲೇಔಟ್‌ನ ಅಬ್ದುಲ್ ಬಷೀರ್ (67) ಹಾಗೂ ಅನೀಸಾ ಫಾತಿಮಾ (57) ಎಂಬುವರನ್ನು ಬಂಧಿಸಲಾಗಿದೆ. ಅವರಿಂದ 502 ಕೆ.ಜಿ. ತೂಕದ 15 ರಕ್ತ ಚಂದನದ ತುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.

‘ರಕ್ತ ಚಂದನದ ತುಂಡುಗಳನ್ನು ಟಾಟಾ ಏಸ್‌ ವಾಹನದಲ್ಲಿ ತಂದಿದ್ದ ಆರೋಪಿಗಳು, ಭಾನುವಾರ (ನ. 29) ನಸುಕಿನಲ್ಲಿ ತಮ್ಮ ಮನೆಯೊಳಗೆ ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪಿಎಸ್‌ಐ ಯಲ್ಲವ್ವ ಮನ್ನಣ್ಣನವರ ನೇತೃತ್ವದ ತಂಡ, ಮನೆ ಬಳಿ ಹೋಗಿ ತಪಾಸಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ’ ಎಂದೂ ವಿವರಿಸಿದರು.

ADVERTISEMENT

‘ಟಾಟಾ ಏಸ್ ವಾಹನ, ಮೊಬೈಲ್, ತೂಕದ ಯಂತ್ರ ಹಾಗೂ ಚಾಕುವನ್ನೂ ಆರೋಪಿಗಳಿಂದ ಜಪ್ತಿ ಮಾಡಲಾಗಿದೆ. ರಕ್ತಚಂದನದ ತುಂಡುಗಳನ್ನು ಅವರು ಎಲ್ಲಿಂದ ತಂದಿದ್ದರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಹೇಳಿದರು.

ಅಪಹರಿಸಿ ಕೊಲೆ: ‘ಬಂಧಿತ ಆರೋಪಿ ಸುಹೇಲ್‌ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಮೂರು ವರ್ಷಗಳ ಹಿಂದೆ ನಡೆದ ಕೊಲೆ ರಹಸ್ಯ ಬಯಲಾಗಿದೆ’ ಎಂದು ಧರ್ಮೇಂದ್ರಕುಮಾರ್ ತಿಳಿಸಿದರು.

‘2017ರಲ್ಲಿ ನೂರ್ ಎಂಬುವರನ್ನು ಅಪಹರಿಸಿದ್ದ ಸುಹೇಲ್ ಹಾಗೂ ಮೂವರು ಸಹಚರರು, ಗೌರಿಬಿದನೂರಿನ ಫಾರ್ಮ್‌ಹೌಸ್‌ವೊಂದಕ್ಕೆ ಎಳೆದೊಯ್ದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು. ನಂತರ ತಲೆಮರೆಸಿಕೊಂಡಿದ್ದರು.’

‘ಈಗ ಸಿಕ್ಕಿಬಿದ್ದಿರುವ ಆರೋಪಿ ಸುಹೇಲ್, ಕೊಲೆ ಸಂಬಂಧ ತಪ್ಪೊಪ್ಪಿಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೂ ವಿಶೇಷ ತಂಡ ರಚಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.