ಬೆಂಗಳೂರು: ವಿದ್ಯುತ್ ಪರಿವರ್ತಕಗಳನ್ನು (ಟ್ರಾನ್ಸ್ ಫಾರ್ಮರ್) ತಯಾರಿಸುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ) ಆವರಣದಲ್ಲಿ ನಿರ್ಮಾಣವಾಗಲಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಜಾರ್ಜ್, ‘ಆರು ತಿಂಗಳಲ್ಲಿ ಈ ಘಟಕದ ಕಾಮಗಾರಿ ಪೂರ್ಣಗೊಳಿಸಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಇದು ಸರ್ಕಾರಿ ಕಾರ್ಖಾನೆ ಆಗಿರುವುದರಿಂದ ಎಲ್ಲ ಎಸ್ಕಾಂಗಳು ಮತ್ತು ಕೆಪಿಟಿಸಿಎಲ್ ವ್ಯಾಪ್ತಿಯ ಪರಿವರ್ತಕಗಳನ್ನು ಇಲ್ಲಿಯೇ ದುರಸ್ತಿ ಮಾಡಲಾಗುವುದು’ ಎಂದು ತಿಳಿಸಿದರು.
‘ಕವಿಕಾದಲ್ಲಿ ವಾರ್ಷಿಕ 2500 ವಿದ್ಯುತ್ ಪರಿವರ್ತಕಗಳನ್ನು ತಯಾರಿಸಬಹುದಾಗಿದೆ. ಆದರೆ, ಅಷ್ಟು ಪ್ರಮಾಣದಲ್ಲಿ ತಯಾರಿಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಯಾರಿಕೆ ಪ್ರಮಾಣ ಹೆಚ್ಚಿಸಲು ಎಸ್ಕಾಂ ಮತ್ತು ಬ್ಯಾಂಕ್‌ಗಳ ಮೂಲಕ ಅಗತ್ಯ ನೆರವು ನೀಡಲಾಗುವುದು’ ಎಂದು ತಿಳಿಸಿದರು.
‘ಕವಿಕಾಗೆ ₹50 ಕೋಟಿ ನೀಡುವಂತೆ ಎಸ್ಕಾಂಗಳಿಗೆ ಸೂಚಿಸಲಾಗಿದೆ. ಬೆಸ್ಕಾಂ ವತಿಯಿಂದ ಈಗಾಗಲೇ ₹12.50 ಕೋಟಿ ನೀಡಲಾಗಿದೆ. ಉಳಿದ ಮೊತ್ತವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಕವಿಕಾ ವ್ಯವಸ್ಥಾಪಕ ನಿರ್ದೇಶಕ ಲೋಖಂಡೆ ಸ್ನೇಹಲ್ ಸುಧಾಕರ್ ಮಾತನಾಡಿ, ‘ಕವಿಕಾದಲ್ಲೇ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರ ಆರಂಭಿಸುವುದರಿಂದ ದುರಸ್ತಿ ಕೆಲಸ ತ್ವರಿತವಾಗಿ ಆಗಲಿದೆ. ಭವಿಷ್ಯದಲ್ಲಿಈ ದುರಸ್ತಿ ಕೇಂದ್ರದಲ್ಲಿ ಪರಿವರ್ತಕಗಳ ತಯಾರಿಕೆಯನ್ನೂ ಮಾಡಲಾಗುವುದು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕವಿಕಾ ಅಧ್ಯಕ್ಷ ಎಚ್.ಸಿ.ಲಲಿತ್ ರಾಘವ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶಂಕರ್, ಕವಿಕಾ ಕಾರ್ಯನಿರ್ವಾಹಕ ನಿರ್ದೇಶಕ ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.
* ಅಂದಾಜು ₹14 ಕೋಟಿ ವೆಚ್ಚದಲ್ಲಿ ನಿರ್ಮಾಣ
* 2500 ಪರಿವರ್ತಕಗಳ ತಯಾರಿಕೆ
* ಆರು ತಿಂಗಳೊಳಗೆ ಪೂರ್ಣಗೊಳಿಸುವ ಭರವಸೆ
20 ಮೆಗಾವಾಟ್ ಸಾಮರ್ಥ್ಯ
ಸುಮಾರು ₹14 ಕೋಟಿ ವೆಚ್ಚದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಘಟಕವನ್ನು ಆರಂಭಿಸಲಾಗುತ್ತಿದೆ. 20 ಮೆಗಾವಾಟ್ ಸಾಮರ್ಥ್ಯದವರೆಗಿನ ಪರಿವರ್ತಕಗಳ ದುರಸ್ತಿ ಮಾಡುವ ಸಾಮರ್ಥ್ಯವನ್ನು ಈ ಘಟಕ ಹೊಂದಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.