ADVERTISEMENT

ಲಾಕ್‌ಡೌನ್‌: ತೃತೀಯ ಲಿಂಗಿಗಳ ಸಂಕಷ್ಟ

ಸರ್ಕಾರ, ಪೊಲೀಸರು ನಮ್ಮನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ l ಸಹಾಯಕ್ಕಾಗಿ ಮನವಿ

ಜಿ.ಶಿವಕುಮಾರ
Published 28 ಮೇ 2021, 21:57 IST
Last Updated 28 ಮೇ 2021, 21:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಲಾಕ್‌ಡೌನ್‌ನಿಂದಾಗಿ ಕೆಲಸ ಇಲ್ಲದಂತಾಗಿದೆ. ಇದರಿಂದ ಒಪ್ಪೊತ್ತಿನ ಊಟಕ್ಕೂ ಪಡಿಪಾಟಲು ಎದುರಿಸಬೇಕಾಗಿದೆ. ಸರ್ಕಾರಕ್ಕೆ ನಮ್ಮ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಪೊಲೀಸರ ದೌರ್ಜನ್ಯವಂತೂ ಮಿತಿಮೀರಿದೆ. ಎಲ್ಲರೂ ನಮ್ಮನ್ನು ಅನ್ಯಗ್ರಹದ ಜೀವಿಗಳಂತೆ ನೋಡುತ್ತಾರೆ. ನಾವು ಯಾರಿಗೂ ಬೇಡವಾಗಿದ್ದೇವೆ’....

ಬೆಂಗಳೂರಿನಲ್ಲಿರುವ ತೃತೀಯ ಲಿಂಗಿಯರ ಅಳಲು ಇದು. ಕೂಡ್ಲು ಗೇಟ್‌, ಬೊಮ್ಮನಹಳ್ಳಿ, ಆರ್‌ಪಿಸಿ ಲೇಔಟ್‌, ಕೆಂಗೇರಿ, ಯಶವಂತಪುರ, ಹೆಬ್ಬಾಳ, ದಾಸರಹಳ್ಳಿ, ವಿಜಯನಗರ ಹೀಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಈ ಸಮುದಾಯಕ್ಕೆ ಸೇರಿದ ಸುಮಾರು 10 ಸಾವಿರ ಮಂದಿ ನೆಲೆಸಿದ್ದಾರೆ. ಭಿಕ್ಷಾಟನೆಯಿಂದ ಬರುವ ಹಣವೇ ಇವರಿಗೆ ಜೀವನಾಧಾರ. ಕೆಲವರು ಲೈಂಗಿಕ ಕಾರ್ಯಕರ್ತರಾಗಿಯೂ ಕೆಲಸ ಮಾಡುತ್ತಾರೆ. ಕೋವಿಡ್‌ನಿಂದಾಗಿ ಅದಕ್ಕೂ ಕುತ್ತುಬಂದಿದ್ದು, ದಿಕ್ಕೇ ತೋಚದ ಸ್ಥಿತಿಯಲ್ಲಿ ಇವರಿದ್ದಾರೆ. ಸರ್ಕಾರದಿಂದ ಏನಾದರೂ ಪರಿಹಾರ ಸಿಗಬಹುದೇನೊ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ನಿರಾಸೆ ಕಾಡಿದೆ.

ಸದ್ಯಕ್ಕಂತೂ ಬೆಂಗಳೂರು ತೊರೆಯುವಂತಿಲ್ಲ. ಊರಿಗೆ ಹೋದರೂ ಸಂಬಂಧಿಕರು ಮನೆಗೆ ಸೇರಿಸುವುದಿಲ್ಲ. ಇಂತಹ ತ್ರಿಶಂಕು ಸ್ಥಿತಿಯಲ್ಲಿ ಬದುಕು ಸಾಗಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ADVERTISEMENT

‘ನಾವು ಭಿಕ್ಷಾಟನೆ ಮೂಲಕ ಹೊಟ್ಟೆ ಹೊರೆಯುತ್ತಿದ್ದೆವು. ಕೆಲವರು ಲೈಂಗಿಕ ಕಾರ್ಯಕರ್ತರಾಗಿಯೂ ದುಡಿಯುತ್ತಿದ್ದರು. ಲಾಕ್‌ಡೌನ್‌ ನಮ್ಮ ಜೀವನೋಪಾಯವನ್ನೇ ಕಸಿದುಕೊಂಡಿದೆ. ಬೆಳಿಗ್ಗೆ 6 ರಿಂದ 10ಗಂಟೆವರೆಗೆ ಅಗತ್ಯ ವಸ್ತು ಖರೀದಿಸಲು ಸರ್ಕಾರ ಅನುಮತಿ ನೀಡಿದೆ. ಈ ಅವಧಿಯಲ್ಲಿ ಯಾರು ಭಿಕ್ಷೆ ಹಾಕುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲೈಂಗಿಕ ಕಾರ್ಯಕರ್ತರಾಗಿ ದುಡಿಯಲೂ ಸಾಧ್ಯವಿಲ್ಲ. ಇದು ಸರ್ಕಾರದ ಅರಿವಿಗೆ ಬಂದಿಲ್ಲವೇ. ನಮ್ಮದು ಅತ್ಯಂತ ಶೋಷಿತ ಸಮುದಾಯ. ಹೀಗಿದ್ದರೂ ಸರ್ಕಾರ ಯಾವುದೇ ಪರಿಹಾರ ಪ್ರಕಟಿಸಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಪ್ರಶ್ನಿಸಿದರು.

‘ರಾಜಸ್ಥಾನ, ಕೇರಳ, ಅಸ್ಸಾಂ, ಮಹಾರಾಷ್ಟ್ರದಲ್ಲಿ ತೃತೀಯ ಲಿಂಗಿಯರನ್ನು ಗೌರವದಿಂದ ಕಾಣಲಾಗುತ್ತಿದೆ. ಆದರೆ ನಮ್ಮ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ನಿರ್ದಿಷ್ಟ ಅವಧಿವರೆಗೆ ಲಾಕ್‌ಡೌನ್‌ ಹೇರುವುದಾಗಿ ಸರ್ಕಾರ ಮೊದಲೇ ತಿಳಿಸಿದ್ದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆ ಕೆಲಸ ಆಗಲಿಲ್ಲ. ಸರ್ಕಾರ ಗಂಟೆಗೊಂದು ತೀರ್ಮಾನ ಪ್ರಕಟಿಸುವ ಮೂಲಕ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಸರ್ಕಾರಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಮನವಿ ಪತ್ರ ಸ್ವೀಕರಿಸಿ ಅದನ್ನು ಕಸದ ಬುಟ್ಟಿಗೆ ಹಾಕುತ್ತಾರಷ್ಟೇ. ಅದರಿಂದ ಯಾವ ಪ್ರಯೋಜನವೂ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಮತ್ತು ಪೊಲೀಸರು ನಮ್ಮನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ. ನಮಗೆ ಜೀವನ ಭದ್ರತೆಯೇ ಇಲ್ಲದಂತಾಗಿದೆ. ಒಂದೊಮ್ಮೆ ಅನಿವಾರ್ಯಕ್ಕೆ ಕಟ್ಟುಬಿದ್ದು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೂ ಕೊರೊನಾ ಸೋಂಕು ತಗುಲುವ ಅಪಾಯವಿದೆ. ಲಸಿಕೆಗಾಗಿ ಆರೋಗ್ಯ ಕೇಂದ್ರಗಳಿಗೆ ಹೋದರೆ ಬೈಯ್ದು ಮನೆಗೆ ಕಳಿಸುತ್ತಾರೆ. ಸರ್ಕಾರದಿಂದ ನೆರವು ಸಿಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಖಾಸಗಿ ಸಂಸ್ಥೆಯ ಯಾರಾದರು ಸಹಾಯ ಮಾಡಿದರೆ ಹೇಗೋ ಬದುಕು ನಡೆಸಬಹುದು’ ಎಂದು ನಕ್ಷತ್ರ ಮನವಿ ಮಾಡಿದರು.

ಬೇಡಿಕೆಗಳೇನು?
*ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಮುದಾಯದ ಸದಸ್ಯರಿಗೆ ತಿಂಗಳಿಗೆ ₹20 ಸಾವಿರ ನೆರವು ಪ್ರಕಟಿಸಬೇಕು.

*ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲರ ಮನೆ ಬಾಡಿಗೆಯನ್ನು ಸರ್ಕಾರವೇ ಪಾವತಿಸಬೇಕು. ವಿದ್ಯುತ್‌ ಹಾಗೂ ನೀರಿನ ಬಿಲ್‌ ಅನ್ನು ಸರ್ಕಾರವೇ ಭರಿಸಬೇಕು ಅಥವಾ ಮನ್ನಾ ಮಾಡಬೇಕು.

*ಸಮುದಾಯದವರಿಗೆ ಪ್ರತ್ಯೇಕವಾಗಿ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು.

***

ಎರಡು ತಿಂಗಳಿಂದ ಬಾಡಿಗೆ ಕಟ್ಟಿಲ್ಲ. ಸಾಲಮಾಡಿಯಾದರೂ ಬಾಡಿಗೆ ನೀಡುವಂತೆ ಪೀಡಿಸುತ್ತಿದ್ದಾರೆ. ಇಲ್ಲದಿದ್ದರೆ ಮನೆಯಿಂದ ಹೊರ ಹಾಕುವುದಾಗಿ ಬೆದರಿಸುತ್ತಿದ್ದಾರೆ.
-ಸೌಮ್ಯ, ತೃತೀಯ ಲಿಂಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.