ADVERTISEMENT

ವಿಮಾನ ನಿಲ್ದಾಣಕ್ಕೆ ಪ್ರಯಾಣ ಇನ್ನು ಬಲು ಅಗ್ಗ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 19:47 IST
Last Updated 26 ಡಿಸೆಂಬರ್ 2020, 19:47 IST
ಉದ್ಘಾಟನೆಗೆ ಸಜ್ಜಾಗಿರುವ ರೈಲು ನಿಲುಗಡೆ ತಾಣ
ಉದ್ಘಾಟನೆಗೆ ಸಜ್ಜಾಗಿರುವ ರೈಲು ನಿಲುಗಡೆ ತಾಣ   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವುದೇ ದುಬಾರಿ ಎನಿಸಿರುವ ಸಂದರ್ಭದಲ್ಲಿ ತೀರಾ ಅಗ್ಗದ ದರದಲ್ಲೇ ಪ್ರಯಾಣ ಮಾಡುವ ಕಾಲ ಈಗ ಹತ್ತಿರವಾಗಿದೆ.

ಈ ನಿಲ್ದಾಣಕ್ಕೆ ಆರು ಮೆಮು ರೈಲುಗಳ ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಸಜ್ಜಾಗಿದೆ. ಯಶವಂತಪುರದಿಂದ ವಿಮಾನ ನಿಲ್ದಾಣದ ಬಳಿ ರೈಲು ನಿಲುಗಡೆ ತಾಣಕ್ಕೆ ₹10 ದರದಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ. ಸಿದ್ಧಗೊಂಡಿರುವ ವಿಮಾನ ನಿಲ್ದಾಣ ಉದ್ಘಾಟನೆಯಷ್ಟೇ ಬಾಕಿ ಇದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಪ್ರಯಾಣಿಕರೂ ಸೇರಿ ನಿಲ್ದಾಣ ಮತ್ತು ಕಾರ್ಗೊ ಟರ್ಮಿನಲ್‌ನಲ್ಲಿ ಕೆಲಸ ಮಾಡುವ ಜನ ಸೇರಿ ನಿತ್ಯ ಸರಾಸರಿ 1.30 ಲಕ್ಷ ಜನ ನಗರದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಾರೆ. ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣ ತಲುಪಲು ಗಂಟೆಗಟ್ಟಲೆ ಪ್ರಯಾಣಿಸುವುದು ಅನಿವಾರ್ಯವಾಗಿದೆ.

ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು ರನ್‌ವೇ ಸಿದ್ಧಗೊಳ್ಳುತ್ತಿದೆ. ಬಂದು ಹೋಗುವ ವಿಮಾನಗಳ ಸಂಖ್ಯೆ, ಪ್ರಯಾಣಿಕರ ಸಂಖ್ಯೆ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಾಗಲಿವೆ. ನಗರದಿಂದ ಅಲ್ಲಿಗೆ ಸಂಚಾರ ಮಾಡುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಬದಿಯಲ್ಲೇ ಇರುವ ರೈಲ್ವೆ ಮಾರ್ಗದಲ್ಲಿ ನಿಲುಗಡೆ ತಾಣ ನಿರ್ಮಿಸಲಾಗಿದೆ.

ರೈಲ್ವೆ ಇಲಾಖೆ ಜತೆ ಒಡಂಬಡಿಕೆ ಮಾಡಿಕೊಂಡಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು(ಬಿಐಎಎಲ್‌) ₹3 ಕೋಟಿ ವೆಚ್ಚದಲ್ಲಿ ರೈಲು ನಿಲುಗಡೆ ತಾಣ ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.