ADVERTISEMENT

ಉದ್ಯಾನ, ಗಿಡ–ಮರಗಳಿಗೆ ಸಂಸ್ಕರಿತ ನೀರು: ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 15:49 IST
Last Updated 24 ಫೆಬ್ರುವರಿ 2025, 15:49 IST
<div class="paragraphs"><p>ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌</p></div>

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

   

ಬೆಂಗಳೂರು: ನಗರದಲ್ಲಿರುವ ಉದ್ಯಾನಗಳು, ಕೆರೆಗಳು, ರಸ್ತೆ ವಿಭಜಕಗಳಲ್ಲಿರುವ ಗಿಡ–ಮರಗಳಿಗೆ ಸಂಸ್ಕರಿತ ನೀರನ್ನೇ ಬಳಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶಿಸಿದರು.

ಅಧಿಕಾರಿಗಳ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ಗಿಡ–ಮರಗಳಿಗೆ ನೀರು ಪೂರೈಸಲು ಎಷ್ಟು ಟ್ಯಾಂಕರ್‌ಗಳ ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಿ, ಸಂಸ್ಕರಿತ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

ಉದ್ಯಾನಗಳಲ್ಲಿ ಕೊಳವೆಬಾವಿಗಳ ಸ್ಥಿತಿ-ಗತಿಯ ಕುರಿತು ವರದಿ ನೀಡಲು ಸೂಚಿಸಿದ ತುಷಾರ್‌ ಗಿರಿನಾಥ್‌, ‘ಕೊಳವೆ ಬಾವಿಗಳು ದುರಸ್ತಿಯಲ್ಲಿರುವ ಉದ್ಯಾನಗಳಿಗೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿಸಿದ ನೀರನ್ನು ಟ್ಯಾಂಕರ್‌ಗಳ ಮೂಲಕ ಪೂರೈಸಬೇಕು’ ಎಂದರು.

ನಗರದಲ್ಲಿ ಮರದ ಎಲೆಗಳು ಉದುರುತ್ತಿದ್ದು, ಅವುಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬಿಎಸ್‌ಡಬ್ಲ್ಯುಎಂಎಲ್ ವತಿಯಿಂದಲೂ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ 1,280 ಉದ್ಯಾನಗಳಲ್ಲಿ 100 ಉದ್ಯಾನಗಳಲ್ಲಿ ಎಲೆ ಗೊಬ್ಬರ ತಯಾರಿಕಾ ಘಟಕಗಳ (ಲೀವ್ಸ್ ಕಾಂಪೋಸ್ಟರ್) ನಿರ್ಮಾಣ ಶೀಘ್ರ ಪೂರ್ಣಗೊಳಿಸಿ, ಉದುರಿದ ಎಲೆಗಳನ್ನು ಸ್ಥಳದಲ್ಲಿಯೇ ಗೊಬ್ಬರವನ್ನಾಗಿಸಬೇಕು. ಅದನ್ನು ಉದ್ಯಾನಗಳಲ್ಲಿಯೇ ಬಳಸಿಕೊಳ್ಳಬೇಕು ಎಂದರು.

ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ಸತೀಶ್, ಅರ್ಚನಾ, ರಮ್ಯಾ, ಕರೀಗೌಡ, ಸ್ನೇಹಲ್, ರಮೇಶ್, ದಿಗ್ವಿಜಯ್ ಬೋಡ್ಕೆ, ಗಿರೀಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.