ADVERTISEMENT

ಮಾಸ್ಕ್‌ ಹಾಕದೆ ರೋಗಿಗಳಿಗೆ ಚಿಕಿತ್ಸೆ! ಧೈರ್ಯ ತುಂಬುವ ಯತ್ನ ಎಂದ ಡಾ. ರಾಜು

ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಆರೋಪ *ಧೈರ್ಯ ತುಂಬುವ ಯತ್ನ– ಡಾ. ರಾಜು

​ಪ್ರಜಾವಾಣಿ ವಾರ್ತೆ
Published 16 ಮೇ 2021, 19:34 IST
Last Updated 16 ಮೇ 2021, 19:34 IST
ಡಾ. ರಾಜು ಕೃಷ್ಣಮೂರ್ತಿ
ಡಾ. ರಾಜು ಕೃಷ್ಣಮೂರ್ತಿ   

ಬೆಂಗಳೂರು: ನಗರದ ಮೂಡಲಪಾಳ್ಯ ವೃತ್ತದಲ್ಲಿರುವ ಸಾಗರ್‌ ಕ್ಲಿನಿಕ್‌ನಲ್ಲಿ ವೈದ್ಯರು, ಶುಶ್ರೂಷಕರು ಸೇರಿದಂತೆ ಯಾವುದೇ ವೈದ್ಯಕೀಯ ಸಿಬ್ಬಂದಿ ಮಾಸ್ಕ್‌ ಹಾಕದೆ, ಸ್ಯಾನಿಟೈಸರ್ ಬಳಸದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಾಗರಿಕರು, ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

‘ರೋಗಿಗಳಿಗೆ ಧೈರ್ಯ ತುಂಬಬೇಕು ಎಂದು ಸಾಗರ್ ಕ್ಲಿನಿಕ್‌ನ ಡಾ. ರಾಜು ಕೃಷ್ಣಮೂರ್ತಿ ಮತ್ತು ಅವರ ಸಿಬ್ಬಂದಿ ಮಾಸ್ಕ್‌ ಹಾಕದೆ, ಪಿಪಿಇ ಕಿಟ್ ಧರಿಸದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಅವರ ಇಂತಹ ಅತಿಯಾದ ವಿಶ್ವಾಸದಿಂದ ಹಲವು ಜನ ಸೋಂಕಿತರಾಗುವ ಅಪಾಯವಿದೆ’ ಎಂದು ಶ್ರುತಿ ಭಾರದ್ವಾಜ್ ಆತಂಕ ವ್ಯಕ್ತಪಡಿಸಿದರು.

‘ಇಲ್ಲಿನ ವೈದ್ಯಕೀಯ ಸಿಬ್ಬಂದಿ ದಿನಕ್ಕೆ ನೂರಾರು ರೋಗಿಗಳ ತಪಾಸಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸೋಂಕು ಇರದವರಿಗೂ ಸೋಂಕು ತಗುಲಬಹುದು’ ಎಂದು ಅರುಣ್ ಹೇಳಿದರು.

ADVERTISEMENT

‘ಮಾಸ್ಕ್‌ ಧರಿಸುವುದರಿಂದ ಸೋಂಕು ಹರಡುವುದನ್ನು ಆದಷ್ಟು ತಡೆಗಟ್ಟಬಹುದು ಎಂದು ವಿಶ್ವದ ಅನೇಕ ದೇಶಗಳಲ್ಲಿ ಸಾಬೀತಾಗಿದೆ. ಡಾ. ರಾಜು ಅವರು ಸಾರ್ವಜನಿಕರನ್ನು ಸಂಕಷ್ಟದಲ್ಲಿ ಇಡುವುದರ ಜೊತೆಗೆ ಅವರ ಸಿಬ್ಬಂದಿಯ ಜೀವವನ್ನೂ ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ’ ಎಂದು ಜಯಪ್ರಕಾಶ್ ದೂರಿದರು.

‘ದಿನಕ್ಕೆ 200ಕ್ಕೂ ಹೆಚ್ಚು ರೋಗಿಗಳು ಈ ಕ್ಲಿನಿಕ್‌ಗೆ ಬರುತ್ತಾರೆ. ನಿರ್ದಿಷ್ಟ ಅಂತರವನ್ನೂ ಇಲ್ಲಿ ಕಾಯ್ದುಕೊಳ್ಳುವುದಿಲ್ಲ. ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಮಾತು, ನಗುವಿನಿಂದ ರೋಗ ವಾಸಿಯಾಗುತ್ತದೆ ಎಂದು ಹೇಳುವುದು ಮೂರ್ಖತನ’ ಎಂದು ಕ್ಲಿನಿಕ್‌ಗೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರು ಹೇಳಿದರು.

‘ಮಾಸ್ಕ್ ಹಾಕದಿರುವುದು ವೈಯಕ್ತಿಕ ಆಯ್ಕೆ’

‘ಮಾಸ್ಕ್‌ ಹಾಕಿಕೊಳ್ಳದೆ, ಸ್ಯಾನಿಟೈಸರ್ ಬಳಸದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ನನ್ನ ವೈಯಕ್ತಿಕ ಆಯ್ಕೆ. ಹಾಗೊಂದು ವೇಳೆ ಮಾಸ್ಕ್ ಹಾಕದೆ ಇರುವುದಕ್ಕೆ ಅಪಾಯವಾಗುವುದಿದ್ದರೆ ಅದರ ಮೊದಲ ಪರಿಣಾಮ ನನ್ನ ಮೇಲೆಯೇ ಆಗುತ್ತದೆ. ಎಲ್ಲದಕ್ಕಿಂತ ಮುಖ್ಯವಾದುದು ರೋಗಿಗಳಿಗೆ ಧೈರ್ಯ ತುಂಬುವುದು. ಆ ಕೆಲಸವನ್ನು ಮಾಡುತ್ತಿದ್ದೇನೆ’ ಎಂದು ಡಾ. ರಾಜು ಕೃಷ್ಣಮೂರ್ತಿ ’ಪ್ರಜಾವಾಣಿ’ಗೆ ಹೇಳಿದರು.

‘ರೋಗಿಗಳು ಮನೆಯಲ್ಲಿ ಮಾಸ್ಕ್ ಹಾಕುವುದು ಬೇಡ. ಹೊರಗಡೆ ಬಂದಾಗ ಹಾಕಬೇಕು ಎಂದೇ ಹೇಳುತ್ತಿದ್ದೇನೆ. ಕ್ಲಿನಿಕ್‌ನಲ್ಲಿ ವೈದ್ಯರು ಸೇರಿದಂತೆ ಐವರು ಕೆಲಸ ಮಾಡುತ್ತಾರೆ. ಈವರೆಗೆ ಯಾರಿಗೂ ಕೋವಿಡ್ ಪರೀಕ್ಷೆ ಮಾಡಿಸಿಲ್ಲ. ಈಗಾಗಲೇ ಅವರಿಗೂ ಸೋಂಕು ತಗುಲಿ ಹೋಗಿರಬಹುದು. ಆದರೆ, ಯಾರಿಗೂ ಅನಾರೋಗ್ಯ ಉಂಟಾಗಿಲ್ಲ’ ಎಂದೂ ಹೇಳಿದರು.

ವೈದ್ಯಕೀಯ ವಲಯದಲ್ಲಿ ಆಕ್ಷೇಪ

‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ 5 ಸಾವಿರ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಾರೆ. ಐಸಿಯುದಲ್ಲಿರುವ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಅವರೆಲ್ಲ ಮಾಸ್ಕ್‌ ಹಾಕದೇ ಓಡಾಡುವುದಿಲ್ಲ. ನಮ್ಮಿಂದ ಸಾರ್ವಜನಿಕರಿಗೆ ಅಥವಾ ಇತರೆ ರೋಗಿಗಳಿಗೆ ಸೋಂಕು ಹರಡಬಾರದು ಎಂಬ ಉದ್ದೇಶವಿಂದ ಮಾಸ್ಕ್ ಧರಿಸುತ್ತಾರೆ. ಧರಿಸಲೇಬೇಕು’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಕುಮಾರ್‌ ಹೇಳಿದರು.

‘ಯಾವುದೇ ರೋಗಿಗೆ ಧೈರ್ಯ ತುಂಬುವುದು ಸ್ವಾಗತಾರ್ಹ. ಆದರೆ, ಮಾಸ್ಕ್‌ ತೆಗೆದು ಧೈರ್ಯ ಹೇಳಬೇಕು ಎಂಬುದೇನೂ ಇಲ್ಲ. ಮಾಸ್ಕ್‌ ಹಾಕಲೇಬೇಕು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿರುವ ಈ ಸಂದರ್ಭದಲ್ಲಿ ಮಾಸ್ಕ್‌ ತೆಗೆದು ಚಿಕಿತ್ಸೆ ನೀಡುತ್ತೇವೆ ಎನ್ನುವುದು ಅಪಾಯಕಾರಿ ನಡೆ’ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ್ ಬಾಬು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.