ADVERTISEMENT

ಸಾಂಘಿಕವಾಗಿ ಬೆಳೆಯಲು ರಂಗಭೂಮಿ ಅಗತ್ಯ: ರಂಗಕರ್ಮಿ ಟಿ.ಎಸ್. ನಾಗಾಭರಣ

ಭಾರತ ರಂಗ ಮಹೋತ್ಸವ–ರಂಗ ಪರಿಷೆಯಲ್ಲಿ ಸುರೇಶ್ ಆನಗಳ್ಳಿಗೆ ‘ಉತ್ಸವ ಗೌರವ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 16:10 IST
Last Updated 3 ಫೆಬ್ರುವರಿ 2026, 16:10 IST
ಕಾರ್ಯಕ್ರಮದಲ್ಲಿ ಸುರೇಶ್ ಆನಗಳ್ಳಿ ಅವರಿಗೆ ಉತ್ಸವ ಗೌರವ ನೀಡಿ ಸನ್ಮಾನಿಸಲಾಯಿತು. ರವೀಂದ್ರನಾಥ್ ಸಿರಿವರ, ಟಿ.ಎಸ್.ನಾಗಾಭರಣ, ಜಿಪಿಒ ಚಂದ್ರು, ಹಂಪ ನಾಗರಾಜಯ್ಯ, ಕೆ.ವಿ.ನಾಗರಾಜಮೂರ್ತಿ ಮತ್ತು ಸುಮಾ ವಿಜಯ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಸುರೇಶ್ ಆನಗಳ್ಳಿ ಅವರಿಗೆ ಉತ್ಸವ ಗೌರವ ನೀಡಿ ಸನ್ಮಾನಿಸಲಾಯಿತು. ರವೀಂದ್ರನಾಥ್ ಸಿರಿವರ, ಟಿ.ಎಸ್.ನಾಗಾಭರಣ, ಜಿಪಿಒ ಚಂದ್ರು, ಹಂಪ ನಾಗರಾಜಯ್ಯ, ಕೆ.ವಿ.ನಾಗರಾಜಮೂರ್ತಿ ಮತ್ತು ಸುಮಾ ವಿಜಯ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾಂಘಿಕವಾಗಿ ಬೆಳೆಯಲು ರಂಗಭೂಮಿ ಅಗತ್ಯವಾಗಿದ್ದು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಂಗ ಕಲೆಯತ್ತ ಬರುವಂತಾಗಬೇಕು’ ಎಂದು ರಂಗಕರ್ಮಿ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು. 

ಕರ್ನಾಟಕ ನಾಟಕ ಅಕಾಡೆಮಿ ಮತ್ತು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಜಂಟಿಯಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಭಾರತ ರಂಗ ಮಹೋತ್ಸವ’ ಹಾಗೂ ‘ರಂಗ ಪರಿಷೆ’ಯ ಮೂರನೇ ದಿನವಾದ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ, ರಂಗ ನಿರ್ದೇಶಕ ಸುರೇಶ್ ಆನಗಳ್ಳಿ ಅವರಿಗೆ ‘ಉತ್ಸವ ಗೌರವ’ ನೀಡಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ನಾಗಾಭರಣ, ‘ಮೊಬೈಲ್‌ನಿಂದಾಗಿ ಬಹಳಷ್ಟು ಜನರಿಗೆ ಜಗತ್ತೇ ಕೈಗೆ ಬಂದಿದೆಯೆಂಬ ಗರ್ವವಿದೆ. ರೀಲ್ಸ್‌ನಲ್ಲಿಯೇ ಎಲ್ಲವನ್ನೂ ನೋಡಬಹುದು ಅಂದುಕೊಂಡಿದ್ದಾರೆ. ಮನುಷ್ಯ ಮತ್ತೊಬ್ಬ ಮನುಷ್ಯನ ಜತೆಗೆ ಮಾತನಾಡಬೇಕೇ ಹೊರತು, ಯಂತ್ರಗಳ ಜತೆಗಲ್ಲ. ಭಾವನೆಗಳನ್ನು ಹೇಳಿಕೊಳ್ಳಲು, ಪರಸ್ಪರ ಒಬ್ಬರನ್ನೊಬ್ಬರು ಬೈದುಕೊಳ್ಳಲಾದರೂ ಇನ್ನೊಬ್ಬರು ಅಗತ್ಯ. ಈ ನಿಟ್ಟಿನಲ್ಲಿ ರಂಗಭೂಮಿ ಎಲ್ಲರನ್ನೂ ಒಳಗೊಳ್ಳಲಿದ್ದು, ಇದು ಸಾಮುದಾಯಿಕ ಕಲೆಯಾಗಿದೆ. ಆದ್ದರಿಂದ ರಂಗ ಪರಿಷೆ ನಿರಂತರ ನಡೆಯಬೇಕು’ ಎಂದು ಹೇಳಿದರು.

ADVERTISEMENT

ಸಾಹಿತಿ ಹಂಪ ನಾಗರಾಜಯ್ಯ ಮತ್ತು ಸುರೇಶ್ ಆನಗಳ್ಳಿ ಅವರು ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಈ ಉತ್ಸವ ಮತ್ತು ಪರಿಷೆ ಪ್ರತಿ ವರ್ಷ ನಡೆಯುವಂತಾಗಬೇಕು ಎಂದರು. 

40 ವರ್ಷ ಪೂರೈಸಿರುವ ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿಯ ‘ರಾಜರಾಜೇಶ್ವರಿ ರಂಗ ಸಮೂಹ’ ಮತ್ತು ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ‘ಸ್ನೇಹರಂಗ’ ತಂಡಗಳಿಗೆ ಇದೇ ವೇಳೆ ‘ರಂಗ ಗೌರವ’ ಪ್ರದಾನ ಮಾಡಲಾಯಿತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭ ಧನಂಜಯ್, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕಿ ವೀಣಾ ಶರ್ಮಾ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ ನಾಗರಾಜಮೂರ್ತಿ, ರಿಜಿಸ್ಟ್ರಾರ್ ನೀಲಮ್ಮ ಉಪಸ್ಥಿತರಿದ್ದರು.

ಪೋಲ್ಯಾಂಡ್‌ನ ಥಿಯೇಟರ್ ಮಲಬಾರ್ ಹೋಟೆಲ್ ತಂಡವು ಲಿಕಾಸ್ ಚೋಕ್ಟೊಸ್ಕಿ ನಿರ್ದೇಶನದಲ್ಲಿ ‘ಉಮಾದೇವಿ ಅಬ್ಸರ್ವ್ಸ್ ವಾಂಡ ಡೈನೌಸ್ಕ’ ಹಾಗೂ ಬೆನಕ ತಂಡವು ‘ಸತ್ತವರ ನೆರಳು’ ನಾಟಕ ಪ್ರಸ್ತುತಪಡಿಸಿದವು. ಯುವ ರಂಗ ಸಂಭ್ರಮದಲ್ಲಿ ‘ಶೂದ್ರತಪಸ್ವಿ’ ಮತ್ತು ‘ರಣದುಂದುಭಿ’ ನಾಟಕಗಳು ಪ್ರದರ್ಶನಗೊಂಡವು. ರೂಪಾಂತರ ಮತ್ತು ವೇದಿಕೆ ಫೌಂಡೇಷನ್‌ನ ತಂಡಗಳು ಕಿರು ನಾಟಕ ಪ್ರಸ್ತುತಪಡಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.