ADVERTISEMENT

ಭಾಷೆಗಳನ್ನು ಉಳಿಸಲು ರಾಷ್ಟ್ರೀಯ ನೀತಿ ಅಗತ್ಯ: ಪುರುಷೋತ್ತಮ ಬಿಳಿಮಲೆ

‘ತುಳು–ಕೊಡವ ಅಳಿವು ಉಳಿವು’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 20:22 IST
Last Updated 19 ಡಿಸೆಂಬರ್ 2021, 20:22 IST
‘ತುಳು–ಕೊಡವ ಅಳಿವು ಉಳಿವು’ ಪುಸ್ತಕವನ್ನು (ಎಡದಿಂದ ನಾಲ್ಕನೆಯವರು) ಪುರುಷೋತ್ತಮ ಬಿಳಿಮಲೆ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ‌ಎನ್.ಯು.ನಾಚಪ್ಪ ಕೊಡವ, ಎಲ್‌.ಹನುಮಂತಯ್ಯ, ಬಿ.ಕೆ.ಹರಿಪ್ರಸಾದ್ ಇದ್ದಾರೆ –ಪ್ರಜಾವಾಣಿ ಚಿತ್ರ 
‘ತುಳು–ಕೊಡವ ಅಳಿವು ಉಳಿವು’ ಪುಸ್ತಕವನ್ನು (ಎಡದಿಂದ ನಾಲ್ಕನೆಯವರು) ಪುರುಷೋತ್ತಮ ಬಿಳಿಮಲೆ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ‌ಎನ್.ಯು.ನಾಚಪ್ಪ ಕೊಡವ, ಎಲ್‌.ಹನುಮಂತಯ್ಯ, ಬಿ.ಕೆ.ಹರಿಪ್ರಸಾದ್ ಇದ್ದಾರೆ –ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಭಾಷೆಯೊಂದು ಸತ್ತರೆ, ಅದರಲ್ಲಿ ಅಡಗಿರುವ ಶ್ರೀಮಂತ ಸಂಸ್ಕೃತಿಯೂ ನಶಿಸುತ್ತದೆ. ನೆಲದ ಭಾಷೆಗಳ ಉಳಿವಿಗಾಗಿ ರಾಷ್ಟ್ರೀಯ ಭಾಷಾ ನೀತಿಯನ್ನು ರೂಪಿಸುವ ಅಗತ್ಯವಿದೆ’ ಎಂದು ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.

ಪ್ರಜಾ ಪ್ರಕಾಶನವು ಭಾನುವಾರ ಆಯೋಜಿಸಿದ್ದ ಆರ್.ಜಯಕುಮಾರ್ ಸಂಪಾದಕತ್ವದ ‘ತುಳು–ಕೊಡವ ಅಳಿವು ಉಳಿವು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸಿರುವುದಾಗಿ 2011ರ ಜನಗಣತಿ ಹೇಳುತ್ತದೆ. ಇದೇ ರೀತಿ ಮುಂದುವರಿದರೆ ಕೊಡವ ಭಾಷೆ ಮಾತನಾಡುವವರೇ ಇಲ್ಲವಾಗುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಬಹುತ್ವ ಭಾರತದಲ್ಲಿ ಹಲವಾರು ಭಾಷೆ ಮತ್ತು ಸಂಸ್ಕೃತಿಗಳು ಸೇರಿಕೊಂಡಿವೆ. ದೇಶದಲ್ಲಿರುವ 19,569 ಭಾಷೆಗಳನ್ನೂ ಜೋಪಾನವಾಗಿ ಕಾಪಾಡಲು ನೆರವಾಗುವ ಸಮಗ್ರ ಭಾಷಾ ನೀತಿಯನ್ನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ,‘ಕನ್ನಡದಂತೆ ಹಿಂದಿಯೂ ಒಂದು ಭಾಷೆ. ಅದನ್ನು ಭಾಷೆಯಾಗಿ ಕಲಿಯಲು ಅಡ್ಡಿಯಿಲ್ಲ. ಆ‌ದರೆ, ನಮ್ಮ ತಾಯಿ ನುಡಿಯನ್ನೂ ಹಿಂದಿಕ್ಕಿ ಸ್ವೀಕರಿಸುವ ಹಾಗೂ ಒತ್ತಾಯಪೂರ್ವಕ ಹೇರಿಕೆ ಸಹಿಸಲಾಗದು’ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ‘ಸಂವಿಧಾನವು ಡಾ.ಬಿ.ಆರ್‌.ಅಂಬೇಡ್ಕರ್ ನೀಡಿದ ಮಹತ್ವದ ಕೊಡುಗೆ. ಅದರ ಆಶಯಗಳ ಮೇಲೆ ಇತ್ತೀಚಿಗೆ ಆಕ್ರಮಣ ನಡೆಯುತ್ತಿದೆ. ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಅದನ್ನು ಕಳೆದುಕೊಂಡರೆ ಪಟೇಲರು, ಜಮೀನ್ದಾರರು ಮಾತ್ರ ಇರುತ್ತಾರೆ. ಉಳಿದವರು ಕೂಲಿಕಾರ್ಮಿಕರಾಗಿ ಉಳಿಯುತ್ತಾರೆ’ ಎಂದರು.

ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್‌.ಯು.ನಾಚಪ್ಪ ಕೊಡವ,‘ಕೆಲವರು ಪೂರ್ವಗ್ರಹ ಪೀಡಿತರಾಗಿ ಕೊಡವರನ್ನು ದೇಶದ್ರೋಹಿಗಳೆಂದು ಕರೆದರು. ಕೊಡವ ಸಮುದಾಯವನ್ನು ನಿರ್ನಾಮ ಮಾಡುವ ಹುನ್ನಾರಗಳು ನಡೆಯುತ್ತಲೇ ಇವೆ. ಅಪರೂಪದ ಕೊಡವ ಸಂಸ್ಕೃತಿ ಹಾಳಾಗುವ ಸ್ಥಿತಿಯಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.