ಬೆಂಗಳೂರು: ಸುರಂಗ ರಸ್ತೆ ಯೋಜನೆ ಕೈಬಿಡುವಂತೆ ಆಗ್ರಹಿಸಿ ಬೆಂಗಳೂರು ಉಳಿಸಿ ಸಮಿತಿಯು ಇದೇ 30ರಂದು ಬೆಳಿಗ್ಗೆ 10.30ಕ್ಕೆ ಮಿಷನ್ ರಸ್ತೆಯಲ್ಲಿರುವ ಎಸ್‌ಸಿಎಂ ಹೌಸ್‌ನಲ್ಲಿ ಜನಸಮಾವೇಶ ಹಮ್ಮಿಕೊಂಡಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಶಶಿಕುಮಾರ್ ಜಿ., ‘₹ 17 ಸಾವಿರ ಕೋಟಿ ವೆಚ್ಚದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ 17 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ದುರಂತ. ಅವೈಜ್ಞಾನಿಕವಾದ ಈ ಯೋಜನೆಯಿಂದ ಬೆಂಗಳೂರಿನ ಪರಿಸರ ವ್ಯವಸ್ಥೆ ಕೆಡಲಿದೆ ಎಂದು ತಜ್ಞರು ಹೇಳುತ್ತಿದ್ದರೂ, ಸರ್ಕಾರ ಈ ಬಗ್ಗೆ ಕಿವಿಗೊಡದೆ ಯೋಜನೆಗೆ ಮುಂದಡಿ ಇಡುತ್ತಿರುವುದು ಸರಿಯಲ್ಲ. ಬೆಂಗಳೂರಿಗೆ ಮಾರಕವಾದ ಈ ಯೋಜನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.
‘ನಮ್ಮ ಮೆಟ್ರೊ ಯಶಸ್ವಿಯಾಗಿ ನಡೆಯುತ್ತಿರುವುದರಿಂದ, ಬೆಂಗಳೂರಿನ ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ದೃಢಪಡಿಸಿದ್ದಾರೆ. 220 ಕಿ.ಮೀ.ಗಳ ಸಂಪೂರ್ಣ ಯೋಜನೆ ಪೂರ್ಣಗೊಂಡ ಬಳಿಕ ಸಂಚಾರ ಸಾಂದ್ರತೆಯಲ್ಲಿ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಬಿಎಂಟಿಸಿ ಪ್ರಸ್ತುತ 45 ಲಕ್ಷಕ್ಕೂ ಅಧಿಕ ಜನರಿಗೆ ಸಂಪರ್ಕ ಕಲ್ಪಿಸುತ್ತಿದೆ. ಈ ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸುವ ಬದಲು, ಸುರಂಗ ರಸ್ತೆಗೆ ಆದ್ಯತೆ ನೀಡುತ್ತಿರುವುದು ಏಕೆ ಎಂಬುದು ನಿಗೂಢವಾಗಿದೆ’ ಎಂದರು.
‘ಬಸ್ ಸೇವೆ, ಮೆಟ್ರೊ ಮಾರ್ಗಗಳು, ರೈಲು ಇತ್ಯಾದಿ ಸಾರ್ವಜನಿಕ ಸಾರಿಗೆ ಸೌಲಭ್ಯಗಳಲ್ಲಿ ಸುಧಾರಣೆಯೊಂದಿಗೆ ಸಂಚಾರ ದಟ್ಟಣೆಗೆ ಪರಿಹಾರವಿದೆ. ಬೆಂಗಳೂರಿನ ಉಳಿವಿಗಾಗಿ ಹೋರಾಟ ನಡೆಸಬೇಕಾದ ಸಮಯ ಬಂದಿದೆ. ಜನಸಮಾವೇಶದಲ್ಲಿ ಪರಿಸರ ತಜ್ಞರು, ವಿಜ್ಞಾನಿಗಳು, ನಗರ ಯೋಜಕರು, ನಿರ್ಮಾಣ ತಂತ್ರಜ್ಞರು ಹಾಗೂ ಸಾಮಾಜಿಕ ಹೋರಾಟಗಾರರು ಪಾಲ್ಗೊಳ್ಳುತ್ತಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.