ADVERTISEMENT

ಕೇಂದ್ರ ರೇಷ್ಮೆ ಮಂಡಳಿ– ಹೆಬ್ಬಾಳ ಸುರಂಗ ರಸ್ತೆ ಮರುವಿನ್ಯಾಸ: ಪ್ರವೇಶ ಬದಲು

ಮೇಖ್ರಿ ವೃತ್ತದಲ್ಲಿ ಇದ್ದ ಮರು ಪ್ರವೇಶ ರದ್ದು, ಸ್ಯಾಂಕಿ ಟ್ಯಾಂಕಿ ರಸ್ತೆಯಲ್ಲಿ ಅವಕಾಶ

ನವೀನ್‌ ಮಿನೇಜಸ್‌
Published 17 ಅಕ್ಟೋಬರ್ 2025, 23:24 IST
Last Updated 17 ಅಕ್ಟೋಬರ್ 2025, 23:24 IST
   

ಬೆಂಗಳೂರು: ಕೇಂದ್ರ ರೇಷ್ಮೆ ಮಂಡಳಿ– ಹೆಬ್ಬಾಳ ನಡುವೆ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆಯ ವಿನ್ಯಾಸವನ್ನು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಬದಲಿಸಿದೆ. ಮೇಖ್ರಿ ಸರ್ಕಲ್‌ ಬಳಿ ಯೋಜಿಸಲಾಗಿದ್ದ ಪ್ರವೇಶ–ನಿರ್ಗಮನವನ್ನು ಕೈಬಿಟ್ಟಿದೆ. ಸ್ಯಾಂಕಿ ಟ್ಯಾಂಕಿ ರಸ್ತೆ ಬಳಿ ಪ್ರವೇಶ ನೀಡುವುದಾಗಿ ಮರುವಿನ್ಯಾಸದಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ರೇಷ್ಮೆ ಮಂಡಳಿಯಿಂದ ಹೆಬ್ಬಾಳದವರೆಗೆ 16.75 ಕಿ.ಮೀ. ಉದ್ದದ ಅವಳಿ ಸುರಂಗ ರಸ್ತೆಯ ಬಗ್ಗೆ  ವಿಸ್ತೃತ ಯೋಜನಾ ವರದಿ ತಯಾರಿಸಲಾಗಿತ್ತು. ₹17,780 ಕೋಟಿ ಅಂದಾಜು ವೆಚ್ಚ ನಿಗದಿ ಮಾಡಲಾಗಿತ್ತು. ಮರುವಿನ್ಯಾಸದಿಂದಾಗಿ ₹419 ಕೋಟಿ ಉಳಿತಾಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಮೂಲ ಯೋಜನೆಯಡಿ ಉತ್ತರ-ದಕ್ಷಿಣ ಅವಳಿ ಸುರಂಗ ರಸ್ತೆಯ ವಿವಿಧ ಪ್ರದೇಶಗಳಲ್ಲಿ ಹೊರ ಸಂಪರ್ಕಕ್ಕಾಗಿ ಒಟ್ಟು 16 ಪ್ರವೇಶ–ನಿರ್ಗಮನ ದ್ವಾರಗಳು ಇದ್ದವು. ಹೆಬ್ಬಾಳ, ಮೇಖ್ರಿ ಸರ್ಕಲ್‌ ಮತ್ತು ವಿಧಾನಸೌಧದಲ್ಲಿ ತಲಾ ನಾಲ್ಕು, ಲಾಲ್‌ಬಾಗ್ ಮತ್ತು ಸೇಂಟ್ ಜಾನ್ಸ್ ಆಸ್ಪತ್ರೆಯ ಬಳಿ ತಲಾ ಎರಡು ‍ಪ್ರವೇಶ/ನಿರ್ಗಮನ ದ್ವಾರಗಳು ಈ ಯೋಜನೆಯಡಿ ಇದ್ದವು.

ADVERTISEMENT

ಪರಿಷ್ಕೃತ ವಿನ್ಯಾಸದಲ್ಲಿ ಮೆಖ್ರಿ ಸರ್ಕಲ್‌ನಲ್ಲಿರುವ ನಾಲ್ಕರಲ್ಲಿ ಮೂರನ್ನು ಬಿ-ಸ್ಮೈಲ್ ಕೈಬಿಟ್ಟಿದೆ. ಸಿ.ವಿ. ರಾಮನ್ ರಸ್ತೆ ಮತ್ತು ವಿಮಾನ ನಿಲ್ದಾಣದ ನಡುವಿನ ವಾಹನಗಳಿಗೆ ಉದ್ದೇಶಿಸಲಾದ ಎರಡು ಪ್ರವೇಶ/ನಿರ್ಗಮನ ಮತ್ತು ಜಯಮಹಲ್ ರಸ್ತೆಯ ಕಡೆಗೆ 820 ಮೀಟರ್ ನಿರ್ಗಮನವನ್ನು ಕೈಬಿಡಲಾಗಿದೆ. ಜಯಮಹಲ್‌ನಿಂದ ಸಿಲ್ಕ್ ಬೋರ್ಡ್ ಕಡೆಗೆ ಮುಖ್ಯ ಸುರಂಗಕ್ಕೆ ಪ್ರವೇಶ ಯೋಜನೆಯನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಸ್ಯಾಂಕಿ ಟ್ಯಾಂಕಿಯಲ್ಲಿ ಹೊಸ ಪ್ರವೇಶ ದ್ವಾರ ನಿರ್ಮಿಸಲು ನಿರ್ಧರಿಸಲಾಗಿದೆ.

ಸಿ.ವಿ. ರಾಮನ್ ರಸ್ತೆಯಲ್ಲಿ ನಿರ್ಗಮಿಸುವ ಬದಲು, ಕೇಂದ್ರ ರೇಷ್ಮೆ ಮಂಡಳಿಯಿಂದ (ಸೆಂಟ್ರಲ್ ಸಿಲ್ಕ್‌ ಬೋರ್ಡ್‌) ಉತ್ತರಕ್ಕೆ ಪ್ರಯಾಣಿಸುವ ವಾಹನ ಚಾಲಕರು ಈ ಯೋಜನೆ ಪ್ರಕಾರ ಬೆಂಗಳೂರು ಗಾಲ್ಫ್ ಕ್ಲಬ್ ಬಳಿ ಎಡಕ್ಕೆ ತಿರುಗಬೇಕು. ಸ್ಯಾಂಕಿ ಟ್ಯಾಂಕಿ ಬಳಿ ಸುರಂಗ ಮಾರ್ಗವನ್ನು ಪ್ರವೇಶಿಸಬೇಕು. ಈ ಭೂಗತ ಮಾರ್ಗವು ಸುಮಾರು 2.45 ಕಿ.ಮೀ. ಇರಲಿದೆ.

ಮರು ವಿನ್ಯಾಸ ಮಾಡಿ ₹ 419 ಕೋಟಿ ಉಳಿಸುವ ಬದಲು ಯೋಜನೆಯನ್ನೇ ಕೈಬಿಡುವ ಮೂಲಕ ಎಲ್ಲ ವೆಚ್ಚವನ್ನು ಉಳಿಸಬಹುದು. ವಾಹನದಟ್ಟಣೆ ಕಡಿಮೆ ಮಾಡಲು ಕಡಿಮೆ ವೆಚ್ಚದಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಬಹುದು ಎಂದು ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳು ಹೇಳಿದರು.

‘ಸ್ಯಾಂಕಿಟ್ಯಾಂಕಿ ಬಳಿ ಹೊಸದಾಗಿ ನಿರ್ಮಿಸಲು ಯೋಜಿಸಿರುವ ಪ್ರವೇಶವು ಪರಿಸರಕ್ಕೆ ತೊಂದರೆ ಉಂಟು ಮಾಡಲಿದೆ. ಕೆರೆಯ ಪರಿಸರ ವ್ಯವಸ್ಥೆಗೆ ಹಾನಿ ಉಂಟು ಮಾಡಲಿದೆ. ಮಲ್ಲೇಶ್ವರ 18ನೇ ಕ್ರಾಸ್, ಸಂಪಿಗೆ ರಸ್ತೆ ಮತ್ತು ಸ್ಯಾಂಕಿ ರಸ್ತೆಯಿಂದ ವಾಹನಗಳು ಸೇರುವ ಜಂಕ್ಷನ್‌ನಲ್ಲಿ ಸಂಚಾರ ವ್ಯವಸ್ಥೆ ಇನ್ನಷ್ಟು ಹದಗೆಡಲಿದೆ’ ಎಂದು ಸಿಟಿಜನ್ಸ್ ಫಾರ್ ಸ್ಯಾಂಕಿಯ ಪ್ರೀತಿ ಸುಂದರ್‌ರಾಜನ್ ಹೇಳಿದರು.

‘ಸ್ಯಾಂಕಿ ರಸ್ತೆಯ ಕೆಳಗಿರುವ ಕೆರೆದಂಡೆ ಎಷ್ಟು ಪ್ರಬಲವಾಗಿದೆ ಎಂದು ನಮಗೆ ತಿಳಿದಿಲ್ಲ. ಅಲ್ಲಿ ಸುರಂಗ ಕೊರೆಯುವುದು ಗಂಭೀರ ಅಪಾಯವನ್ನು ಉಂಟುಮಾಡಬಹುದು, ವಿಶೇಷವಾಗಿ ವೈಯಾಲಿಕಾವಲ್‌ನಂತಹ ತಗ್ಗು ಪ್ರದೇಶದಲ್ಲಿರುವ ವಸತಿಗಳಿಗೆ ತೊಂದರೆಯಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಬಿ-ಸ್ಮೈಲ್‌ನ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಸಣ್ಣ ಬದಲಾವಣೆ ಅವಶ್ಯವಾಗಿದ್ದು, ಹೊಸ ಪ್ರವೇಶ ನಿರ್ಮಿಸುವುದರಿಂದ ಸ್ಯಾಂಕಿಟ್ಯಾಂಕಿ ಕೆರೆಗೆ ಯಾವುದೇ ಅಪಾಯ ಉಂಟಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.