ADVERTISEMENT

ಬೆಂಗಳೂರು | ಬಾಲಕಿಯರಿಬ್ಬರ ಕೊಲೆ: ಮಲತಂದೆ ಬಂಧನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 16:18 IST
Last Updated 25 ಆಗಸ್ಟ್ 2024, 16:18 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದ ಈಶಾನ್ಯ ವಿಭಾಗದ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಶನಿವಾರ ಇಬ್ಬರು ಬಾಲಕಿಯರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ಮಲತಂದೆ ಮೋಹನ್ ಎಂಬಾತನನ್ನು ಅಮೃತಹಳ್ಳಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ADVERTISEMENT

ಕೊಲೆಗೀಡಾದ 14 ಹಾಗೂ 16 ವರ್ಷದ ಬಾಲಕಿಯರು ಕ್ರಮವಾಗಿ 8 ಮತ್ತು 9ನೇ ತರಗತಿ ಓದುತ್ತಿದ್ದರು. ಹೆಣ್ಣು ಮಕ್ಕಳನ್ನು ಮಲತಂದೆಯೇ ಕೊಲೆ ಮಾಡಿ ಪರಾರಿಯಾಗಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು. ಘಟನೆ ನಡೆದ ವೇಳೆ ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ತೆರಳಿದ್ದರು. ಘಟನೆ ಬಳಿಕ ಆರೋಪಿ ಮೊಬೈಲ್ ಸ್ವಿಚ್ಡ್‌ ಆಫ್‌ ಆಗಿತ್ತು. ಆತನ ಬಂಧನಕ್ಕೆ ಮೂರು ತಂಡವನ್ನು ರಚಿಸಲಾಗಿತ್ತು.

ನಗರದ ರೈಲ್ವೆ ನಿಲ್ದಾಣ ಬಳಿ ಬಚ್ಚಿಟ್ಟುಕೊಂಡಿದ್ದ ಮೋಹನ್‌ನನ್ನು ಪೊಲೀಸರು ಬಂಧಿಸಿ, ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. 

‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿಗೆ ಆರೋಪಿ ಉತ್ತರಿಸುತ್ತಿಲ್ಲ. ಘಟನೆ ಬಳಿಕ ಆಘಾತಕ್ಕೆ ಒಳಗಾಗಿರುವ ಸಾಧ್ಯತೆ ಇದೆ. ಹೆಣ್ಣು ಮಕ್ಕಳಿಗೆ ಹುಡುಗರ ಜತೆ ಸೇರದಂತೆ ಬುದ್ದಿ ಹೇಳುತ್ತಿದ್ದ. ಅವರ ನಡವಳಿಕೆ ಬಗ್ಗೆ ಅನುಮಾನಪಡುತ್ತಿದ್ದ ಎಂಬ ಮಾಹಿತಿ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಕುಟುಂಬವು ದಾಸರಹಳ್ಳಿಯ ಕಾವೇರಿ ಬಡಾವಣೆಯ ಬಾಡಿಗೆ ಮನೆಯೊಂದರ ಎರಡನೇ ಮಹಡಿಯಲ್ಲಿ ನೆಲೆಸಿತ್ತು. ಕೊಲೆಯಾದ ಹೆಣ್ಣು ಮಕ್ಕಳ ತಾಯಿ ಅನಿತಾ ಅವರು ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡು, ಡೆಹ್ರಾಡೂನ್‌ನ ಮೋಹನ್ ಎಂಬಾತನ ಜತೆ ಒಂಬತ್ತು ವರ್ಷಗಳ ಹಿಂದೆ ಎರಡನೇ ಮದುವೆ ಆಗಿದ್ದರು. ಮೋಹನ್ ಫುಡ್‌ ಡೆಲಿವರಿ ಕೆಲಸ ಮಾಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.