ADVERTISEMENT

ಉಬರ್ ಚಾಲಕನ ವಿಚಾರಣೆ; ಹುಬ್ಬಳ್ಳಿಗೆ ಪೊಲೀಸರ ತಂಡ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 19:53 IST
Last Updated 27 ಜುಲೈ 2021, 19:53 IST

ಬೆಂಗಳೂರು: ಎಂಬಿಬಿಎಸ್ ವಿದ್ಯಾರ್ಥಿ ಉಮೈದ್ ಅಹಮ್ಮದ್ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು, ಉಬರ್ ಚಾಲಕರೊಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಇನ್ನೊಂದು ತಂಡ, ವಿದ್ಯಾರ್ಥಿ ಬಗ್ಗೆ ಮಾಹಿತಿ ಕಲೆಹಾಕಲು ಹುಬ್ಬಳ್ಳಿಗೆ ಹೋಗಿದೆ.

ನಗರದ ಸುಲ್ತಾನ್ ಪಾಳ್ಯ ನಿವಾಸಿಯಾಗಿದ್ದ ಉಮೈದ್, ರೈಲ್ವೆ ಇಲಾಖೆ ನಿವೃತ್ತ ಉದ್ಯೋಗಿಯೊಬ್ಬರ ಮಗ. ಕಸ್ತೂರಿನಗರ ಬಳಿಯ ರೈಲು ಹಳಿ ಮೇಲೆ ಜುಲೈ 26ರಂದು ಉಮೈದ್ ಅವರ ಮೃತದೇಹ ಸಿಕ್ಕಿತ್ತು. ಕತ್ತಿನ ಮೇಲೆ ಗಾಯದ ಗುರುತು ಇರುವುದರಿಂದ ಇದೊಂದು ಕೊಲೆ ಎಂಬುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಹುಬ್ಬಳ್ಳಿಯ ಪ್ರತಿಷ್ಠಿತ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಉಮೈದ್, ಬಕ್ರೀದ್ ಹಬ್ಬಕ್ಕೆಂದು ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಹುಬ್ಬಳ್ಳಿಗೆ ಹೋಗುವುದಾಗಿ ಹೇಳಿ ಜುಲೈ 24ರಂದು ಮನೆ ಬಿಟ್ಟಿದ್ದರು. ಅದಾದ ನಂತರ ಅವರು ಹುಬ್ಬಳ್ಳಿಗೆ ಹೋಗಿಲ್ಲ. ಮೊಬೈಲ್ ಸಹ ಸ್ವಿಚ್‌ ಆಫ್ ಆಗಿತ್ತು. ಇದರ ನಡುವೆಯೇ ಮೃತದೇಹ ಸಿಕ್ಕಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ಉಬರ್ ಚಾಲಕನ ವಿಚಾರಣೆ: ‘ಉಮೈದ್ ಅವರು ಉಬರ್ ಕ್ಯಾಬ್‌ನಲ್ಲಿ ಮನೆಯಿಂದ ಹೊರಟಿದ್ದರು. ಆದರೆ, ಅವರು ಎಲ್ಲಿ ಇಳಿದುಕೊಂಡರು ಎಂಬುದು ಗೊತ್ತಾಗಿಲ್ಲ. ಉಬರ್ ಕ್ಯಾಬ್ ಚಾಲಕನನ್ನು ಪತ್ತೆ ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

‘ಸಾವಿನಲ್ಲಿ ಹಲವು ಅನುಮಾನಗಳು ಇವೆ. ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಯಸ್ಥರನ್ನು ವಿಚಾರಣೆ ನಡೆಸಲಾಗುತ್ತಿದೆ. ಉಮೈದ್ ಅವರ ಕರೆ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.