ADVERTISEMENT

ಬೆಂಗಳೂರು | ಒಳಚರಂಡಿ: 5,146 ಅನಧಿಕೃತ ಸಂಪರ್ಕ ಪತ್ತೆ

ದಂಡ, ಸೇವಾ ಶುಲ್ಕ ವಸೂಲಿ ಮಾಡಿ ಅಧಿಕೃತಗೊಳಿಸಲು ಜಲಮಂಡಳಿ ಕ್ರಮ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 23:30 IST
Last Updated 30 ಡಿಸೆಂಬರ್ 2024, 23:30 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ಬೆಂಗಳೂರು: ನಗರದಾದ್ಯಂತ ಅನಧಿಕೃತ ಒಳಚರಂಡಿ ಸಂಪರ್ಕವನ್ನು ಪತ್ತೆ ಮಾಡಿ, ಸಂಬಂಧಿಸಿದವರಿಗೆ ನೋಟಿಸ್‌ ನೀಡಿ, ದಂಡವಿಧಿಸಿ, ಸೇವಾ ಶುಲ್ಕ ವಸೂಲಿ ಮಾಡಿ, ಅವುಗಳನ್ನು ಅಧಿಕೃತಗೊಳಿಸಲು ಜಲಮಂಡಳಿ ಮುಂದಾಗಿದೆ. ಈ ಮೂಲಕ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ, ಆದಾಯ ಹೆಚ್ಚಿಸಿಕೊಳ್ಳಲು ಜಲಮಂಡಳಿ ಹೆಜ್ಜೆ ಇಟ್ಟಿದೆ.

ನಗರದ ಕೆಲವೆಡೆ ಜಲಮಂಡಳಿಯಿಂದ ಅಧಿಕೃತವಾಗಿ ಸಂಪರ್ಕ ಪಡೆಯದೆ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಹರಿಸಲಾಗುತ್ತಿದೆ. ಇದರಿಂದ ಒಳಚರಂಡಿ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗಿದ್ದು, ಮ್ಯಾನ್‌ಹೋಲ್‌ಗಳು ಭರ್ತಿಯಾಗಿ ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿದೆ. 

ಇತ್ತೀಚೆಗೆ ನಗರದಲ್ಲಿ ಸುರಿದ ಜಡಿ ಮಳೆಗೆ, ಪ್ರಮುಖ ರಸ್ತೆಗಳಲ್ಲಿನ ಕೆಲವು ಮ್ಯಾನ್‌ಹೋಲ್‌ಗಳು ಭರ್ತಿಯಾಗಿ ರಸ್ತೆಗೆ ಕೊಳಚೆ ನೀರು ಹರಿದಿತ್ತು. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿತ್ತು. ಜಲಮಂಡಳಿಗೆ ಜನರು ದೂರುಗಳನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ‌ ಜಲಮಂಡಳಿಯು ಕೆಲವು ತಿಂಗಳಿಂದ ಒಳಚರಂಡಿ ಅನಧಿಕೃತ ಸಂಪರ್ಕಗಳನ್ನು ಪತ್ತೆ ಹಚ್ಚಿ ಸಕ್ರಮಗೊಳಿಸಲು ಸಮೀಕ್ಷೆ ನಡೆಸುತ್ತಿದೆ.

ADVERTISEMENT

43,437 ಸಂಪರ್ಕ ಸಮೀಕ್ಷೆ: ಪ್ರಸ್ತುತ ನಗರದಾದ್ಯಂತ 10.70 ಲಕ್ಷ ಒಳಚರಂಡಿ ಸಂಪರ್ಕಗಳನ್ನು ಜಲಮಂಡಳಿ ಹೊಂದಿದೆ. ಈವರೆಗೆ 43,437 ಸಂಪರ್ಕಗಳ ಸಮೀಕ್ಷೆ ನಡೆಸಿದೆ. ಇದರಲ್ಲಿ 5,146 ಅನಧಿಕೃತ ಸಂಪರ್ಕಗಳನ್ನು ಪತ್ತೆ ಮಾಡಲಾಗಿದೆ. ವಾಯವ್ಯ ಭಾಗದಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಪೂರ್ವ–2 ವಿಭಾಗದಲ್ಲಿ 5,919 ಸಂಪರ್ಕ ಪರಿಶೀಲಿಸಲಾಗಿದ್ದು, ಇದರಲ್ಲಿ 804 ಅನಧಿಕೃತ ಸಂಪರ್ಕಗಳು ಪತ್ತೆಯಾಗಿವೆ. ಇದು ಸಮೀಕ್ಷೆಯಲ್ಲಿ ಪತ್ತೆಯಾದ ಹೆಚ್ಚು ಅನಧಿಕೃತ ಸಂಪರ್ಕಗಳಾಗಿವೆ. ಈ ಪೈಕಿ 492 ಸಂಪರ್ಕಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಲಾಗಿದೆ. 241 ಮಂದಿಗೆ ನೋಟಿಸ್ ನೀಡಲಾಗಿದೆ. 

ಪೂರ್ವ–1 ವಿಭಾಗದಲ್ಲಿ 479, ವಾಯವ್ಯ–1ರಲ್ಲಿ 972, ನೈರುತ್ಯ–2ರಲ್ಲಿ 415 ಅನಧಿಕೃತ ಸಂಪರ್ಕಗಳನ್ನು ಪತ್ತೆ ಮಾಡಲಾಗಿದೆ. ಇವು ಜಲಮಂಡಳಿಯ 16 ವಿಭಾಗಗಳಲ್ಲಿ ಅತಿ ಹೆಚ್ಚು ಅನಧಿಕೃತ ಸಂಪರ್ಕಗಳು ಪತ್ತೆಯಾಗಿರುವ ವಿಭಾಗಗಳು. ಇವುಗಳಲ್ಲಿ ಕ್ರಮವಾಗಿ 1,957, 5,744 ಮತ್ತು 1,924 ಸಂಪರ್ಕಗಳನ್ನು ಪರಿಶೀಲಿಸಲಾಗಿದ್ದು, 101, 268 ಮತ್ತು 248 ಸಂಪರ್ಕಗಳ ‘ಸಕ್ರಮ’ಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಮಂಡಳಿ ತಿಳಿಸಿದೆ. 

ಅನಧಿಕೃತ ಒಳಚರಂಡಿ ಸಂಪರ್ಕ ಪಡೆದಿರುವವರಿಗೆ ಜಲಮಂಡಳಿ ಸಿಬ್ಬಂದಿ ನೋಟಿಸ್‌ ನೀಡಿದ್ದಾರೆ. ನೋಟಿಸ್‌ ನೀಡಿದ ನಂತರ ಹಲವು ವಿಭಾಗಗಳಲ್ಲಿ ನಾಗರಿಕರು ಸಂಪರ್ಕವನ್ನು ಸಕ್ರಮಗೊಳಿಸಿಕೊಂಡಿದ್ದಾರೆ. ನಗರದ‌ 16 ವಿಭಾಗಗಳಲ್ಲಿ, 2,451 ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಲಾಗಿದೆ. 2,719 ಮನೆಗಳಿಗೆ ನೋಟಿಸ್ ನೀಡಿ, ದಂಡ ವಸೂಲಿ ಮಾಡಲಾಗಿದೆ. ತಕ್ಷಣವೇ ಸಂಪರ್ಕವನ್ನು ಸಕ್ರಮಗೊಳಿಸಬೇಕು ಎಂದು ತಿಳಿವಳಿಕೆ ನೀಡಲಾಗಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.‌

(ಸಾಂದರ್ಭಿಕಚಿತ್ರ)

ಅನಧಿಕೃತ ಸಂಪರ್ಕದಿಂದ ಸಮಸ್ಯೆ

ಕಾವೇರಿ ನೀರಿನ ಸಂಪರ್ಕ ಪಡೆಯುವವರಿಗೆ ಅದರ ಜತೆಗೆ ನಿಗದಿತ ಶುಲ್ಕ ಪಾವತಿಸಿಕೊಂಡು ಒಳಚರಂಡಿ ಸಂಪರ್ಕವನ್ನೂ ಮಂಡಳಿ ನೀಡಲಿದೆ. ಸಂಪರ್ಕಗಳ ಸಂಖ್ಯೆಗೆ ಅನುಗುಣವಾಗಿ ಕೊಳವೆ ಮಾರ್ಗ ಮ್ಯಾನ್‌ಹೋಲ್‌ ನಿರ್ಮಾಣ ಮಾಡಲಿದೆ. ಇದರ ಆಧಾರದಲ್ಲಿಯೇ ತ್ಯಾಜ್ಯ ಸಂಸ್ಕರಣಾ ಘಟಕವನ್ನೂ(ಎಸ್‌ಟಿಪಿ) ನಿರ್ಮಿಸಿ ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ನಿರ್ವಹಣೆ ಮಾಡಲಿದೆ. ಅನಧಿಕೃತ ಸಂಪರ್ಕಗಳು ಹೆಚ್ಚಾದರೆ ಒಳಚರಂಡಿ ವ್ಯವಸ್ಥೆ ಮೇಲೆ ಒತ್ತಡ ಉಂಟಾಗಿ ತ್ಯಾಜ್ಯ ನೀರು ರಸ್ತೆಗೆ ಬರಲಿದೆ. ನಿರ್ವಹಣೆಗೂ ತೊಡಕಾಗಲಿದೆ. 

‘ಸಕ್ರಮ’ಕ್ಕೆ ಸಲಹೆ 

‘ಅನಧಿಕೃತ ಒಳಚರಂಡಿ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳುವ ಕುರಿತು ಸಾಕಷ್ಟು ಪ್ರಚಾರ ಮಾಡಿದ್ದೇವೆ. ಸಂಬಂಧಿಸಿದವರಿಗೆ ನೋಟಿಸ್‌ಗಳನ್ನೂ ನೀಡಿದ್ದೇವೆ. ಸಾಕಷ್ಟು ಕಾಲಾವಕಾಶ ನೀಡಿದ್ದೇವೆ. ಅನಧಿಕೃತ ಸಂಪರ್ಕ ಪಡೆದಿರುವವರು ಹದಿನೈದು ದಿನಗಳೊಳಗೆ ಸಕ್ರಮಗೊಳಿಸಿಕೊಳ್ಳಬೇಕು’ ಎಂದು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.