ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಐಕ್ಯತಾ ಓಟ’ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಇತರರು ಭಾಗವಹಿಸಿದ್ದರು.
ಬೆಂಗಳೂರು: ದೇಶ ಕಂಡ ಧೀಮಂತ ನಾಯಕ, ಈ ದೇಶದ ಮೊದಲ ಗೃಹ ಸಚಿವ ‘ಉಕ್ಕಿನ ಮನುಷ್ಯ’ ಎಂದೇ ಖ್ಯಾತರಾಗಿದ್ದ ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ, ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಐಕ್ಯತಾ ಓಟವನ್ನು ಏರ್ಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
‘ಐಕ್ಯತಾ ಓಟವು’ ಬೆಳಿಗ್ಗೆ ‘ಗೇಟ್ ನಂ.2, ಕಂಠೀರವ ಕ್ರೀಡಾಂಗಣ’ದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ದೇಶದ ಐಕ್ಯತೆಗೆ ತಮ್ಮದೇ ಆದ ರೀತಿಯಲ್ಲಿ ಸೇವೆ ಮಾಡಿದವರು. ದೇಶದ ಅಖಂಡತೆಗೂ ವಿಶಿಷ್ಟ ಕೊಡುಗೆ ನೀಡಿದರು ಎಂದು ವಿಶ್ಲೇಷಿಸಿದರು.
ಅವರ ಸ್ಮರಣೆ, ಅವರು ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಮುಂದಿನ ಪೀಳಿಗೆಗೂ ತಿಳಿಸುವ ಸದುದ್ದೇಶವನ್ನು ಐಕ್ಯತಾ ಓಟ (ರನ್ ಫಾರ್ ಯುನಿಟಿ) ಹೊಂದಿದೆ ಎಂದು ವಿವರಿಸಿದರು. ದೀಪಾವಳಿಯ ನಿಮಿತ್ತ ಮುಂಚಿತವಾಗಿ ಇವತ್ತೇ ಐಕ್ಯತಾ ಓಟ ಆಯೋಜಿಸಿದ್ದೇವೆ ಎಂದು ತಿಳಿಸಿದರು. ಇದರಲ್ಲಿ ರಾಜಕೀಯ ಏನೂ ಇಲ್ಲ ಎಂದರು.
ದೇಶದ ಏಕತೆ, ಅಖಂಡತೆ ಬಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಇದ್ದ ಕನಸನ್ನು ಇಂದಿನ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನಸಾಗಿ ಮಾಡುತ್ತಿದ್ದಾರೆ. ಅವರ ಕರೆಯ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದಾಗಿ ತಿಳಿಸಿದರು. ಭಾರತವನ್ನು 2047ರ ಹೊತ್ತಿಗೆ ವಿಕಸಿತ ಭಾರತ ಮಾಡುವ ಸಂಕಲ್ಪ ನಮ್ಮ ಪ್ರಧಾನಿ ಮೋದಿಜೀ ಅವರದು. ಆ ಸಂಕಲ್ಪ ಈಡೇರಿಸಲು ದೇಶದ ಅಖಂಡತೆಯೂ ಅಷ್ಟೇ ಮುಖ್ಯ ಎಂದು ವಿಶ್ಲೇಷಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಮಾತನಾಡಿ, ಪಟೇಲರು ಕರ್ನಾಟಕದಲ್ಲೂ ನಿಜಾಮ್ ಆಡಳಿತವನ್ನು ರದ್ದು ಮಾಡಿ, ದಂಗೆ, ಅತ್ಯಾಚಾರ, ಅನಾಚಾರಗಳನ್ನು ನಿಲ್ಲಿಸಿ ಭಾರತವನ್ನು ಒಂದುಗೂಡಿಸಿದವರು ಎಂದು ವಿವರಿಸಿದರು. ಅವರ 150 ವರ್ಷದ ಜನ್ಮದಿನವನ್ನು ನಾವು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು. ದೇಶದ ಏಕತೆ, ದೇಶ ಮುನ್ನಡೆಸಲು, ಅಭಿವೃದ್ಧಿಗಾಗಿ ಈ ಓಟ ಎಂದರು.
ಶಾಸಕರಾದ ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ, ರಘು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್, ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್ ಹಾಗೂ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.