ADVERTISEMENT

ಸಿದ್ಧವಾಗದ ಬಡ್ತಿ ಪಟ್ಟಿ; ಸಿಬ್ಬಂದಿ ಅಸಮಾಧಾನ

ಸಿ.ಎಸ್.ನಿರ್ವಾಣ ಸಿದ್ದಯ್ಯ
Published 28 ಆಗಸ್ಟ್ 2018, 19:15 IST
Last Updated 28 ಆಗಸ್ಟ್ 2018, 19:15 IST

ಬೆಂಗಳೂರು: ಹೆಸರಘಟ್ಟ ಮತ್ತು ದಾಸನಪುರ ಹೋಬಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಯ ಕರ ವಸೂಲಿಗಾರರು ಮತ್ತು ಕಾರ್ಯದರ್ಶಿಗಳ ಹೊಸ ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ಆದೇಶ ನೀಡಿತ್ತು. ಆದರೆ, ಆದೇಶ ನೀಡಿ ಐದಾರು ತಿಂಗಳು ಕಳೆದರೂ ಪಟ್ಟಿ ಇನ್ನೂ ಸಿದ್ದವಾಗಿಲ್ಲ.

ಸಾಮಾನ್ಯವಾಗಿ ಪ್ರತಿ ವರ್ಷ ಜನವರಿಯಲ್ಲಿ ಬಡ್ತಿ ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಲಾಗುತ್ತದೆ. 2018ರಲ್ಲಿ ಸಿದ್ದವಾಗಬೇಕಿದ್ದ ಪಟ್ಟಿ ಎಂಟು ತಿಂಗಳು ಕಳೆದರೂ ಸಿದ್ದವಾಗಿಲ್ಲ. 2017ರಲ್ಲಿ ಸರ್ಕಾರದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಬಡ್ತಿ ನೀಡಲಾಗಿದೆ ಎನ್ನುತ್ತಾರೆ ನೊಂದ ಕರವಸೂಲಿಗಾರರು.

‘2000ನೇ ಇಸವಿಯಲ್ಲಿ ಸುರೇಶ್ ಎನ್ನುವರು ಕರವಸೂಲಿಗಾರ ಹುದ್ದೆಗೆ ಸೇರಿದರು. 2003ರಲ್ಲಿ ಇದೇ ಹುದ್ದೆಗೆ ಸೇರಿದ ವಿಶ್ವನಾಥ್ ಮತ್ತು 2004ರಲ್ಲಿ ಸೇರಿದ ಹರೀಶ್ ಎನ್ನುವರಿಗೆ ಬಡ್ತಿಯನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ನೀಡಿದೆ. 2000ನೇ ಇಸವಿಯಲ್ಲಿ ಸೇರಿದ ಸುರೇಶ್ ಅವರಿಗೆ ಸರ್ಕಾರದ ನಿಯಮದ ಪ್ರಕಾರ ಬಡ್ತಿ ನೀಡಬೇಕಿತ್ತು. ಆದರೆ ಯಾವ ಕಾರಣದಿಂದ ಇವರಿಬ್ಬರಿಗೆ ಬಡ್ತಿ ನೀಡಿದರೋ ಗೊತ್ತಿಲ್ಲ’ ಎಂದು ಕರವಸೂಲಿಗಾರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಕಳೆದ ಹತ್ತು ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡು ಬಂದಿರುವ ಕರವಸೂಲಿಗಾರರ ಸೇವೆಯನ್ನು ಪರಿಗಣನೆ ಮಾಡಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯದರ್ಶಿಗಳಿಗೆ ನಿವೃತ್ತಿ ವರ್ಷ ಹತ್ತಿರ ಬಂದಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಬಡ್ತಿ ನೀಡಿಲ್ಲ. ಆದರೆ ಕೇವಲ ಆರು ಏಳು ವರ್ಷ ಸೇವೆ ಮಾಡಿದವರಿಗೆ ಬಡ್ತಿ ನೀಡಲಾಗಿದೆ' ಎಂದು ಕೆಲವು ಕಾರ್ಯದರ್ಶಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ ‘ಇನ್ನು ಒಂದು ವಾರದೊಳಗೆ ಪಟ್ಟಿಯನ್ನು ಸಿದ್ದಪಡಿಸುತ್ತೇವೆ. ಈಗಾಗಲೇ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕರಿಂದ ಸೇವಾ ಪಟ್ಟಿಯನ್ನು ತರಿಸಿಕೊಂಡಿದ್ದು ಶೀಘ್ರದಲ್ಲಿಯೇ ಹೊಸ ಪಟ್ಟಿಯನ್ನು ಸಿದ್ದಪಡಿಸಿ ಬಡ್ತಿ ಪಟ್ಟಿ ಪ್ರಕಟಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.