ADVERTISEMENT

ಅಸ್ಪೃಶ್ಯತೆಯ ಅನುಭವ ನನಗೂ ಆಗಿತ್ತು: ಸಚಿವ ರಾಮಲಿಂಗಾರೆಡ್ಡಿ

ನಾರಿ ಶಕ್ತಿ ರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 15:58 IST
Last Updated 4 ಜನವರಿ 2026, 15:58 IST
‘ನಾರಿ ಶಕ್ತಿ’ ರಾಷ್ಟ್ರೀಯ ಸಮ್ಮೇಳನದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದಿಂದ ಸನ್ಮಾನಿಸಲಾಯಿತು.
ಪ್ರಜಾವಾಣಿ ಚಿತ್ರ
‘ನಾರಿ ಶಕ್ತಿ’ ರಾಷ್ಟ್ರೀಯ ಸಮ್ಮೇಳನದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದಿಂದ ಸನ್ಮಾನಿಸಲಾಯಿತು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಣ್ಣವನಿದ್ದಾಗ ನಮ್ಮೂರಿನಲ್ಲಿ ನನಗೂ ಅಸ್ಪೃಶ್ಯತೆಯ ಅನುಭವವಾಗಿತ್ತು. ನಮ್ಮೂರಿನ ಪೂಜಾರಿಯನ್ನು ನಾವು ಮುಟ್ಟಿದರೆ ಅವರು ಪುನಃ ಸ್ನಾನ ಮಾಡಿಕೊಂಡು ಬರುತ್ತಿದ್ದರು’ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕರ್ನಾಟಕ ಆರ್ಯ ಈಡಿಗರ ಮಹಿಳಾ ಸಂಘ ಭಾನುವಾರ ಆಯೋಜಿಸಿದ್ದ ‘ನಾರಿ ಶಕ್ತಿ ರಾಷ್ಟ್ರೀಯ ಸಮ್ಮೇಳನ- 2026’ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣ, ಶತಮಾನದ ಹಿಂದೆ ನಾರಾಯಣ ಗುರುಗಳು, ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ಮಹನೀಯರು ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದರು. ಅಸ್ಪೃಶ್ಯರಿಗೆ ದೇವಾಲಯ ಪ್ರವೇಶ ನಿರಾಕರಿಸಿದಾಗ ನಾರಾಯಣ ಗುರುಗಳು ಅವರಿಗಾಗಿಯೇ ದೇವಾಲಯ ನಿರ್ಮಿಸಿದರು. ಶಾಲೆಗಳನ್ನು ತೆರೆದು ಅಕ್ಷರ ದೀಕ್ಷೆ ನೀಡಿದರು’ ಎಂದು ಸ್ಮರಿಸಿದರು.

ADVERTISEMENT

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಆಶ್ರಯ, ಆರಾಧನಾ ಯೋಜನೆಗಳ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಬಡವರ ಮನದಲ್ಲಿ ನೆಲೆಸಿದ್ದಾರೆ. ಕಡು ಬಡವರಿಗೆ ಹಕ್ಕು ಪತ್ರಗಳನ್ನು ನೀಡಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಆಶ್ರಯದಾತರಾಗಿದ್ದಾರೆ. ಬಡ ವರ್ಗದವರಿಗೂ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ನೀಡಿ ಜನಾರ್ದನ ಪೂಜಾರಿ ಅವರು ಜನಮನದಲ್ಲಿ ಇದ್ದಾರೆ. ಸಿನಿಮಾ ಕ್ಷೇತ್ರಕ್ಕೆ ರಾಜ್‌ಕುಮಾರ್, ಶಿಕ್ಷಣ ಕ್ಷೇತ್ರಕ್ಕೆ ಆರ್‌.ಎಲ್‌.ಜಾಲಪ್ಪ ಅ‍ವರು ಕೊಡುಗೆ ನೀಡಿದ್ದಾರೆ. ಇಡೀ ಈಡಿಗ ಸಮುದಾಯವನ್ನು ಒಗ್ಗೂಡಿಸುವ ಮತ್ತಷ್ಟು ಕೆಲಸ ಆಗಬೇಕಾಗಿದೆ’ ಎಂದರು. 

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಾತನಾಡಿದರು. ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ವೇದ ಕುಮಾರ್ ಸೇರಿದಂತೆ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರಿನ ಶ್ರೀನಾರಾಯಣಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಆರ್ಯ ಈಡಿಗ ಮಹಿಳಾ ಸಂಘದ ಸಂಸ್ಥಾಪಕ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ, ಅಧ್ಯಕ್ಷೆ ಸುಮಲತಾ ಎನ್‌. ಸುವರ್ಣ, ಕಾರ್ಯಕ್ರಮದ ಅಧ್ಯಕ್ಷೆ ಆಶಿತಾ ಶರಣ್‌, ಕಾರ್ಯಾಧ್ಯಕ್ಷೆ ಸುರೇಖಾ ನಾರಾಯಣ, ಉಡುಪಿ ವಿಭಾಗದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜನಂದಿನಿ ಕಾಗೋಡು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.