ಬೆಂಗಳೂರು: ಕರ್ನಾಟಕದಲ್ಲಿರುವ ಪಶುವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ₹ 25 ಕೋಟಿ ಅನುದಾನ ನೀಡುವಂತೆ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ(ಐಸಿಎಆರ್) ಉಪ ಮಹಾನಿರ್ದೇಶಕ (ಪ್ರಾಣಿ ವಿಜ್ಞಾನ) ಡಾ.ರಾಘವೇಂದ್ರ ಭಟ್ಟ ಒತ್ತಾಯಿಸಿದರು.
ಜಾನುವಾರು, ಕೋಳಿ ಮತ್ತು ಸಾಕುಪ್ರಾಣಿಗಳ ಆರೋಗ್ಯ, ಪೋಷಣೆ ಹಾಗೂ ಸೂಕ್ತ ಉತ್ಪಾದನೆಗೆ ಇರುವ ಸವಾಲುಗಳು ಮತ್ತು ಆದ್ಯತೆಗಳು ಕುರಿತ ರಾಷ್ಟ್ರೀಯ ವೈಜ್ಞಾನಿಕ ಸಮಾವೇಶ ಮತ್ತು 22ನೇ ರಾಷ್ಟ್ರೀಯ ಪಶು ವೈದ್ಯಕೀಯ ವಿಜ್ಞಾನ ವಿದ್ವನ್ಮಂಡಲಿ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕರ್ನಾಟಕದಲ್ಲಿ ಖಾಸಗಿ ಪಶುವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಅವಕಾಶ ನೀಡಬಾರದು. ಪಶುವೈದ್ಯಕೀಯ ವೃತ್ತಿಯ ಗುಣಮಟ್ಟ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಬೀದರ್ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ. ವೀರಣ್ಣ ಮಾತನಾಡಿ, ‘ಈ ಸಮಾವೇಶವು ಮೇವಿನ ಕೊರತೆ, ಜಾನುವಾರುಗಳಲ್ಲಿ ರೋಗ ಹರಡುವಿಕೆಯನ್ನು ತಡೆಗಟ್ಟುವ ಕುರಿತು ಚರ್ಚಿಸಲು ಉತ್ತಮ ವೇದಿಕೆಯಾಗಿದೆ. ಪ್ರಸ್ತುತ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ಇದೆ. ಮೂರು ತಿಂಗಳೂಳಗೆ ನೇಮಕಾತಿ ಮಾಡಬೇಕು’ ಎಂದು ಒತ್ತಾಯಿಸಿದರು.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಪಶುವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಎಸ್.ಕೆ. ರಂಜನ್ ಅವರಿಗೆ ಡಾ.ಸಿ.ಎಂ. ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.