ADVERTISEMENT

ದೇಶದ ಹಲವು ಕಡೆಗಳಲ್ಲಿ ಯುಪಿಐ ಪಾವತಿ ಸೇವೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 23:44 IST
Last Updated 10 ಫೆಬ್ರುವರಿ 2026, 23:44 IST
ಯುಪಿಐ
ಯುಪಿಐ   

ಬೆಂಗಳೂರು: ದೇಶದ ಹಲವು ಕಡೆಗಳಲ್ಲಿ ಯುಪಿಐ ಆಧಾರಿತ ಪಾವತಿ ಸೇವೆಗಳಲ್ಲಿ ಮಂಗಳವಾರ ಸಂಜೆ ಸಮಸ್ಯೆ ಎದುರಾಗಿತ್ತು ಎಂದು ಬಳಕೆದಾರರು ದೂರಿದ್ದಾರೆ.

ಯುಪಿಐ ಪಾವತಿ ಸೇವೆ ಬಳಕೆ ಮಾಡುವವರು ತಮ್ಮ ಪಾವತಿ ಆ್ಯಪ್‌ಗಳು ಕೆಲಸ ಮಾಡುತ್ತಿಲ್ಲ ಎಂಬುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಂಡಿದ್ದಾರೆ.

ಇಂಟರ್ನೆಟ್ ಆಧಾರಿತ ಸೇವೆಗಳಲ್ಲಿನ ಅಡಚಣೆಯನ್ನು ದಾಖಲಿಸುವ ಡೌನ್‌ಡಿಟೆಕ್ಟರ್‌ ಕೂಡ ಈ ಸೇವೆಗಳಲ್ಲಿ ವ್ಯತ್ಯಯ ಆಗಿದ್ದನ್ನು ದಾಖಲಿಸಿದೆ. ಹಣ ವರ್ಗಾವಣೆ, ಪಾವತಿಗಳಲ್ಲಿ ಸಮಸ್ಯೆ ಆಗಿರುವುದನ್ನು ಬಳಕೆದಾರರು ತಿಳಿಸಿದ್ದಾರೆ.

ADVERTISEMENT

ಬೆಂಗಳೂರು, ಚೆನ್ನೈ, ಹೈದರಾಬಾದ್‌, ಮುಂಬೈನಲ್ಲಿ ಬಳಕೆದಾರರು ಸಮಸ್ಯೆ ಎದುರಿಸಿದ್ದನ್ನು ಹೇಳಿಕೊಂಡಿದ್ದಾರೆ.

‘ಮೆಟ್ರೊ’ದಲ್ಲೂ ಪರದಾಟ:

ಕ್ಯೂಆರ್‌ ಸ್ಕ್ಯಾನ್‌ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ‘ನಮ್ಮ ಮೆಟ್ರೊ’ ನಿಲ್ದಾಣಗಳ ಕೌಂಟರ್‌ನಲ್ಲಿದೆ. ಇದು ಕಾರ್ಯನಿರ್ವಹಿಸದ್ದರಿಂದ ನಗದು ನೀಡಿ ಟಿಕೆಟ್‌ ಪಡೆಯಬೇಕಾಗಿತ್ತು. ಇದರಿಂದಾಗಿ, ಮಂಗಳವಾರ ಸಂಜೆ 6ರಿಂದ ಸುಮಾರು ಮೂರು ಗಂಟೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದರು.

ರಾತ್ರಿ 9.30ರ ನಂತರ ಬ್ಯಾಂಕ್‌ಗಳ ಸರ್ವರ್‌ ಸಮಸ್ಯೆ ನಿವಾರಣೆಯಾಗಿ, ಯುಪಿಐ ವ್ಯವಸ್ಥೆಯಿಂದಲೇ ಪ್ರಯಾಣಿಕರು ಟಿಕೆಟ್‌ ಪಡೆದರು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.