ADVERTISEMENT

ಬೆಂಗಳೂರು | ‘ಸುದೀರ್ಘ ಆಡಳಿತಕ್ಕೆ ವಾಜಪೇಯಿ ಬುನಾದಿ’: ಬಿ.ಎಲ್.ಸಂತೋಷ್‌

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 16:18 IST
Last Updated 16 ಆಗಸ್ಟ್ 2025, 16:18 IST
<div class="paragraphs"><p>ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ&nbsp; ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಆರ್‌. ಅಶೋಕ, ತೇಜಸ್ವಿನಿ ಅನಂತಕುಮಾರ್‌, ಬಿ.ಎಲ್. ಸಂತೋಷ್‌, ಬಿ.ವೈ. ವಿಜಯೇಂದ್ರ ಹಾಗೂ ಛಲವಾದಿ ನಾರಾಯಣಸ್ವಾಮಿ ಪುಷ್ಪಾರ್ಚನೆ ಮಾಡಿದರು.&nbsp; </p></div>

ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಆರ್‌. ಅಶೋಕ, ತೇಜಸ್ವಿನಿ ಅನಂತಕುಮಾರ್‌, ಬಿ.ಎಲ್. ಸಂತೋಷ್‌, ಬಿ.ವೈ. ವಿಜಯೇಂದ್ರ ಹಾಗೂ ಛಲವಾದಿ ನಾರಾಯಣಸ್ವಾಮಿ ಪುಷ್ಪಾರ್ಚನೆ ಮಾಡಿದರು. 

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕೇಂದ್ರದಲ್ಲಿ ತಮ್ಮ ಪಕ್ಷ ಸುದೀರ್ಘ ಆಡಳಿತ ನಡೆಸಲು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹಾಕಿಕೊಟ್ಟ ಬುನಾದಿ ಕಾರಣ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಹೇಳಿದರು.

ADVERTISEMENT

ನಗರದ ಪುರಭವನದಲ್ಲಿ ಶನಿವಾರ ‘ಅಟಲ್ ಜೀ ಅವರ ಜನ್ಮ ಶತಮಾನೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮತದಾರರ ಅಡಿಪಾಯ ಮಾತ್ರವಲ್ಲದೇ, ಪಕ್ಷಕ್ಕೆ ಮೌಲ್ಯ, ವಿಚಾರಗಳ ಅಡಿಪಾಯವನ್ನು ವಾಜಪೇಯಿ ಹಾಕಿದ್ದರು. ತಾವು ನಂಬಿರುವ ವಿಚಾರ, ಸಂಘಟನೆ, ಕಾರ್ಯಪದ್ಧತಿಯನ್ನು ಬದ್ಧತೆಯಿಂದ ನಿರ್ವಹಿಸಿದ್ದರು. ಸಚಿವರಾಗಬೇಕೆಂಬ ಹಪಾಹಪಿ ಇಲ್ಲದ ಶ್ರೇಷ್ಠ ವ್ಯಕ್ತಿತ್ವ ಅವರದಾಗಿತ್ತು’ ಎಂದು ವಿವರಿಸಿದರು.

‌‘ಬಿಜೆಪಿ ಇಬ್ಬರು ಸಂಸದರನ್ನು ಹೊಂದಿದ್ದ ಸ್ಥಿತಿಯೂ ಇತ್ತು. ಈಗ 16 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಪಡೆದಿದೆ. 297 ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಗೆ ನೆಹರೂ ಕುಟುಂಬದ ನಾಲ್ವರ ಹೆಸರು ಇಡಲಾಗಿದೆ. ಆದರೆ, ವಾಜಪೇಯಿ, ಮೋದಿ ಅವರ ಹೆಸರಿನಲ್ಲಿ ಎಲ್ಲೂ ಯೋಜನೆಗಳಿಲ್ಲ. ನಮ್ಮ ಪ್ರಧಾನಿ , ಮುಖ್ಯಮಂತ್ರಿ ತಮ್ಮ ಹೆಸರು ಹಾಕಿಕೊಂಡಿಲ್ಲ. ಅಸ್ಥಿರ ಸರ್ಕಾರಗಳ ಯುಗದ ಬಳಿಕ ಸಮ್ಮಿಶ್ರ ಸರ್ಕಾರದ ನೇತೃತ್ವವನ್ನು ವಾಜಪೇಯಿ ಅವರು ವಹಿಸಿದ್ದರು’ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಾಜಪೇಯಿ ಮತ್ತು ಕರ್ನಾಟಕದ ನಡುವೆ ಅವಿನಾಭಾವ ಸಂಬಂಧ ಇತ್ತು. ಅದೇ ರೀತಿ ವಾಜಪೇಯಿ ಅವರೊಂದಿಗೆ ಯಡಿಯೂರಪ್ಪ, ಅನಂತಕುಮಾರ್, ಕಾರ್ಯಕರ್ತರ ನಡುವಿನ ಸಂಬಂಧವೂ ಅನನ್ಯ. ಭಾಷೆಯ ಸಮಸ್ಯೆ ಇದ್ದರೂ ಆತ್ಮೀಯತೆಯಿಂದ ಕಾರ್ಯಕರ್ತರನ್ನು ಮಾತನಾಡಿಸುತ್ತಿದ್ದರು. ರಾಜ್ಯದಲ್ಲಿ ಸದೃಢವಾಗಿ ಪಕ್ಷ ಬೆಳೆಯಲು ಅಟಲ್‍ಜೀ ಅವರು ಪ್ರೇರಕರು ಎಂದು ನುಡಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಹೊಸ ಭಾಷ್ಯ ಬರೆದವ ವಾಜಪೇಯಿಯವರು ಅಧಿಕಾರವನ್ನು ಕಡೆಗಣಿಸಿ ತತ್ವ, ಸಿದ್ಧಾಂತಕ್ಕೆ ಒತ್ತು ಕೊಟ್ಟವರು ಎಂದು ವಿವರಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಅದಮ್ಯ ಚೇತನ ಫೌಂಡೇಶನ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು ವಾಜಪೇಯಿ ಅವರ ಪ್ರಾಮಾಣಿಕತೆ, ಬದ್ಧತೆ, ಸರಳ ವ್ಯಕ್ತಿತ್ವ, ಕವಿ ಹೃದಯದ ಕುರಿತು ತಿಳಿಸಿದರು. ಪಕ್ಷಕ್ಕೆ ಅವರ ಕೊಡುಗೆ, ಮಾರ್ಗದರ್ಶನವನ್ನೂ ವಿವರಿಸಿದರು.

ಅಟಲ್ ಜಿ ಜನ್ಮ ಶತಮಾನೋತ್ಸವ ಸಮಿತಿಯ ರಾಜ್ಯ ಪ್ರಮುಖ ಶಿವಯೋಗಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ನಿರೂಪಿಸಿದರು. ಇದಕ್ಕೂ ಮುನ್ನ  ವಾಜಪೇಯಿ ಜೀವನ ಕುರಿತ ಕಿರು ನಾಟಕ ಪ್ರದರ್ಶಿಸಲಾಯಿತು.  

ಸಿದ್ದರಾಮಯ್ಯ ಸಂಗಾತಿಗಳ ಟ್ವೀಟ್‌ಗೆ ಸಂತೋಷ್ ಟೀಕೆ:

‘ಗಾಂಧಿ ಹತ್ಯೆ ಆರ್‌ಎಸ್‌ಎಸ್‌ ಮಾಡಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಇದ್ದಾರೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘ ಬಿಜೆಪಿಗೆ ವೈಚಾರಿಕ ಸೈದ್ಧಾಂತಿಕ ಮತ್ತು ಕಾರ್ಯಬದ್ಧತೆಯ ಬುನಾದಿಯಾಗಿ ಇದ್ದೇ ಇರುತ್ತದೆ. ನಿಮ್ಮ ಸಂಗಾತಿಗಳು (ಸ್ಟಾಲಿನ್ ಪಿಣರಾಯಿ ವಿಜಯನ್‌ ಮಮತಾ ಬ್ಯಾನರ್ಜಿ) ಮಾಡುವ ಟ್ವೀಟ್‌ಗಳು ದೇಶದ ಜನರ ಮನಸ್ಸುಗಳನ್ನು ವಿಚಲಿತಗೊಳಿಸಲು ಆಗುವುದಿಲ್ಲ ಎಂಬುದನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ ’ ಎಂದು ಬಿ.ಎಲ್‌ ಸಂತೋಷ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.