
ಬೆಂಗಳೂರು: ‘ಆಧುನಿಕ ವಿಜ್ಞಾನ ವ್ಯವಸ್ಥೆಯ ಒಳಗಡೆ ವೇದ ವಿಜ್ಞಾನವನ್ನು ಇಟ್ಟು ಪರೀಕ್ಷಿಸುವ ಸಾಹಸಕ್ಕೆ ಮುಂದಾಗದೆ, ಸ್ವತಂತ್ರ ಹಾಗೂ ಪ್ರತ್ಯೇಕವಾಗಿ ವೇದ ವಿಜ್ಞಾನವನ್ನು ಅಧ್ಯಯನ ಮಾಡಬೇಕು’ ಎಂದು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಆಧುನಿಕ ಜಗತ್ತಿನಲ್ಲಿ ವೇದ ವಿಜ್ಞಾನಗಳ ಪ್ರಸ್ತುತತೆ’ 7ನೇ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
‘ಪ್ರಾಚೀನ ಶಾಸ್ತ್ರ ಪರಂಪರೆಯು ವೈಜ್ಞಾನಿಕ ಚಿಂತನೆಯನ್ನು ಒಳಗೊಂಡಿದೆ. ನಮ್ಮ ಪರಂಪರೆ ಬಗ್ಗೆ ಪ್ರಶ್ನೆ ಮಾಡುವುದೇ ವಿಜ್ಞಾನದ ಮೂಲಧರ್ಮವೆಂದು ಕೆಲವರು ಅಂದುಕೊಂಡಿದ್ದಾರೆ. ನೈಜ ವಿಜ್ಞಾನಿಗಳು ಮಾತ್ರ ಈ ಬಗ್ಗೆ ಜಿಜ್ಞಾಸೆ ಮಾಡುತ್ತಾರೆ. ವೇದ ವಿಜ್ಞಾನದಲ್ಲಿಯೂ ಜಿಜ್ಞಾಸೆ ಪ್ರಧಾನವಾಗಿದೆ. ಪ್ರಯೋಗಾಲಯದ ಒಳಗಡೆ ಇರುವುದು ಮಾತ್ರ ವೈಜ್ಞಾನಿಕ, ಹೊರಗಡೆ ಇರುವುದೆಲ್ಲ ಅವೈಜ್ಞಾನಿಕವೆಂಬ ಮನೋಭಾವವೂ ಕೆಲವರಲ್ಲಿದೆ’ ಎಂದು ಹೇಳಿದರು.
‘ವೇದ ಮೂಲ ಚಿಂತನೆಯಲ್ಲಿ ಜ್ಞಾನ ವಿಜ್ಞಾನ ಸೇರಿಸಿ ಅಖಂಡವಾದ ಜ್ಞಾನದ ರೂಪ ನೀಡಲಾಗಿದೆ. ಪಾಶ್ಚಾತ್ಯ ವಿಜ್ಞಾನದ ವ್ಯವಸ್ಥೆಯಡಿ ವೇದ ವಿಜ್ಞಾನ ಇಡಲು ಸಾಧ್ಯವಿಲ್ಲ. ವೇದ ವಿಜ್ಞಾನದ ಮಾನಂಡ, ವ್ಯಾಪ್ತಿ ಬೇರೆ ಬೇರೆ. ವಿಜ್ಞಾನಕ್ಕೆ ಗಣಿತವು ಭಾಷೆಯಾದಂತೆ, ವೇದ ವಿಜ್ಞಾನದ ಮೂಲದ್ರವ್ಯ ಅರಿಯಲು ಸಂಸ್ಕೃತ ಸಹಕಾರಿ’ ಎಂದು ಅಭಿಪ್ರಾಯಪಟ್ಟರು.
ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ, ‘ಫಲಿತಾಂಶ ಮುಂದಿದ್ದರೂ ಅದನ್ನು ನಿರಾಕರಿಸುವ, ನಾಸ್ತಿಕನಿಗೂ ಜಾಗ ನೀಡಿರುವ ಏಕೈಕ ಧರ್ಮ ಹಿಂದೂ ಧರ್ಮ. ಹುದುಗಿಹೋಗಿರುವ ಸತ್ಯವನ್ನು ಹೊರತೆಗೆಯಬೇಕು. ಚಿನ್ನ ಮಣ್ಣಿನಲ್ಲಿ ಬೆರೆತಾಗ ಹಲವು ರೀತಿಯ ಸಂಸ್ಕರಣೆಗೆ ಒಳಗಾಗಿ, ಮಹಿಳೆಯರ ಕೊರಳಿನಲ್ಲಿ ಶೋಭಿಸಲಿದೆ. ಅದೇ ರೀತಿ, ವೇದ ವಿಜ್ಞಾನದಲ್ಲಿ ಅಡಗಿರುವ ಜ್ಞಾನವನ್ನು ಹೊರತೆಗೆಯಬೇಕು’ ಎಂದು ಹೇಳಿದರು.
ಮುಳಬಾಗಿಲಿನ ಶ್ರೀಪಾದರಾಜ ಮಠದ ಸುಜಯನಿಧಿತೀರ್ಥ ಸ್ವಾಮೀಜಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.