ADVERTISEMENT

ವಾಹನ ಸ್ವಚ್ಛತೆಗೆ ಕುಡಿಯುವ ನೀರು ಬಳಸುವಂತಿಲ್ಲ: ಜಲಮಂಡಳಿ ಪ್ರಕಟಣೆ

ಜಲಮಂಡಳಿಯಿಂದ ‘ನೀರು ಉಳಿಸಿ ಬೆಂಗಳೂರು ಉಳಿಸಿ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 23:30 IST
Last Updated 4 ಮಾರ್ಚ್ 2024, 23:30 IST
<div class="paragraphs"><p>ಜಲಮಂಡಳಿ </p></div>

ಜಲಮಂಡಳಿ

   

ಬೆಂಗಳೂರು: ವಾಹನ ತೊಳೆಯಲು, ತೋಟಗಾರಿಕೆ, ಫ್ಲಶ್ ಮಾಡಲು, ಪಾರ್ಕಿಂಗ್ ಪ್ರದೇಶವನ್ನು ಸ್ವಚ್ಛಗೊಳಿಸಲು ಹಾಗೂ ಇತ್ಯಾದಿ ಬಳಕೆಗೆ ಕುಡಿಯುವ ನೀರನ್ನು ಬಳಸದಂತೆ ಸಾರ್ವಜನಿಕ ಹಿತಾಸಕ್ತಿಯಿಂದ ನಿಷೇಧ ಆದೇಶ ಜಾರಿ ಮಾಡಲಾಗುತ್ತಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಜಲಮಂಡಳಿಯು ‘ನೀರು ಉಳಿಸಿ ಬೆಂಗಳೂರು ಉಳಿಸಿ’ ಅಭಿಯಾನ ಆರಂಭಿಸಿದೆ. ಐಐಎಸ್ಸಿ, ಐಐಎಂ, ಬಿಎಚ್‌ಇಎಲ್‌ ಹಾಗೂ ಇನ್ನಿತರೆ ಪ್ರಮುಖ ಸಂಸ್ಥೆಗಳಲ್ಲಿ ಬಳಸಿದ ನೀರನ್ನು ತೃತೀಯ ಹಂತದಲ್ಲಿ ಸಂಸ್ಕರಿಸಲಾಗಿದ್ದು, ಅದನ್ನು ಬಳಸಿಕೊಳ್ಳಲು ಚಿಂತಿಸಲಾಗಿದೆ.

ADVERTISEMENT

ಕೆರೆಗಳ ಆವರಣದಲ್ಲಿ ಫಿಲ್ಟರ್ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ. ಅಂತರ್ಜಲ ಮಟ್ಟವನ್ನು ಮರುಪೂರಣಗೊಳಿಸಲು ಸಂಸ್ಕರಿಸಿದ ನೀರಿನಿಂದ ಕೆರೆಗಳನ್ನು ತುಂಬಿಸಲಾಗುತ್ತದೆ. ಅಂತರ್ಜಲದ ಮೇಲಿನ ಬೇಡಿಕೆಯನ್ನು ಕಡಿಮೆ ಮಾಡಲು ಕಟ್ಟಡ ನಿರ್ಮಾಣ ಉದ್ದೇಶಕ್ಕಾಗಿ ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ಕೈಗಾರಿಕೆಗಳಲ್ಲಿ ಕುಡಿಯುವುದಕ್ಕೆ ಹೊರತುಪಡಿಸಿ ಇತರ ಬಳಕೆಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಸುವಂತೆ ಸೂಚಿಸಲಾಗಿದೆ.

ಜಲಮಂಡಳಿಯು ಕೈಗೊಂಡಿರುವ ಕ್ರಮಗಳು:

* 1,000 ರಿಂದ 3,000 ಲೀಟರ್ ಸಾಮರ್ಥ್ಯದ 336 ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಕೊಳೆಗೇರಿ ಪ್ರದೇಶ, ಜನನಿಬಿಡ ಪ್ರದೇಶ, ತಗ್ಗು ಮತ್ತು ಎತ್ತರ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ ಕುಡಿಯುವ ನೀರನ್ನು ಉಚಿತವಾಗಿ ಪಡೆಯುತ್ತಿದ್ದಾರೆ.

*6,000 ಲೀಟರ್ ಸಾಮರ್ಥ್ಯದ ಸುಮಾರು 76 ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಸಿಂಟೆಕ್ಸ್ ಟ್ಯಾಂಕ್‌ಗಳಿಗೆ ನೀರನ್ನು ಪೂರೈಸಲಾಗುತ್ತಿದೆ.

* ಜನನಿಬಿಡ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಲು 82 ತಾತ್ಕಾಲಿಕ ಮೊಬೈಲ್ ನೀರಿನ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ.

* 110 ಹಳ್ಳಿಗಳು ಮತ್ತು 256 ನೀರಿನ ಸಮಸ್ಯೆಯಿರುವ ಪ್ರದೇಶಗಳಲ್ಲಿ ನೀರಿನ ಬೇಡಿಕೆಯನ್ನು ಪೂರೈಸಲು ಬೆಂಗಳೂರಿನ ಜಿಲ್ಲಾಧಿಕಾರಿ ಮತ್ತು ಸಾರಿಗೆ ಇಲಾಖೆಯ ಮುಖಾಂತರ ಸುಮಾರು 210 ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ.

*ಜಲಮಂಡಳಿಯು 313 ಸ್ಥಳಗಳಲ್ಲಿ ಬೋರ್‌ವೆಲ್ ಕೊರೆಯುತ್ತಿದೆ. ‌ನಿಷ್ಕ್ರಿಯಗೊಂಡ ಕೊಳವೆಬಾವಿಗಳನ್ನು ಮತ್ತೆ ಕೊರೆಸಲು ಕ್ರಮವಹಿಸಲಾಗುತ್ತಿದೆ.

* ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಮಳೆ ನೀರು ಸಂಗ್ರಹ ಕ್ಷೇತ್ರದ ತಜ್ಞರೊಂದಿಗೆ ಸಭೆ ನಡೆಸಲಾಗಿದ್ದು, ಅವರ ಸಲಹೆಯನ್ನು ಪರಿಗಣಿಸಿ ಕ್ರಮಕೈಗೊಳ್ಳಲಾಗುತ್ತಿದೆ.

* ಕೈಗಾರಿಕೆ ಸೇರಿದಂತೆ ದೊಡ್ಡ ಪ್ರಮಾಣ ನೀರಿನ ಸಂಪರ್ಕವನ್ನು ಪಡೆದಿರುವ ಪ್ರಮುಖ ಗ್ರಾಹಕರೊಂದಿಗೆ ಸಭೆ ನಡೆಸಿ, ಅವರು ಕುಡಿಯಲು ಮಾತ್ರ ಕಾವೇರಿ ನೀರು ಬಳಸುವಂತೆ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.