ADVERTISEMENT

ವೆಂಕಟೇಶ್ವರಸ್ವಾಮಿ ರಥೋತ್ಸವ ಸಂಭ್ರಮ

ಕಂಸಾಳೆ, ಡೊಳ್ಳು ಕುಣಿತ, ತಮಟೆ, ಕಲಾ ತಂಡಗಳ ನೃತ್ಯ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 20:55 IST
Last Updated 6 ಮಾರ್ಚ್ 2023, 20:55 IST
ರಾಮಗೊಂಡನಹಳ್ಳಿಯಲ್ಲಿ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು.
ರಾಮಗೊಂಡನಹಳ್ಳಿಯಲ್ಲಿ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು.   

ಕೆ.ಆರ್.ಪುರ: ವೈಟ್‌ಫೀಲ್ಡ್ ಸಮೀಪದ ರಾಮಗೊಂಡನಹಳ್ಳಿ ಗ್ರಾಮದ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ
ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಉತ್ಸವ ಮೂರ್ತಿಗೆ ಹೂವಿನ ಅಲಂಕಾರ ಮಾಡಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಂಸಾಳೆ, ಡೊಳ್ಳು ಕುಣಿತ, ತಮಟೆ, ಮಂಗಳವಾದ್ಯ ಸಹಿತ ಕಲಾ ತಂಡಗಳ ನೃತ್ಯ ಪ್ರದರ್ಶನ ನೆರೆದಿದ್ದ ಭಕ್ತರ ಪ್ರಮುಖ ಆಕರ್ಷಣೆಯಾಗಿತ್ತು.

ವರ್ತೂರು, ವೈಟ್‌ಫೀಲ್ಡ್, ಸಿದ್ದಾಪುರ, ತೂಬರಹಳ್ಳಿ, ನಲ್ಲೂರಹಳ್ಳಿ, ವರ್ತೂರು ಕೊಡಿ ಸುತ್ತಮುತ್ತಲಿನ ಹಳ್ಳಿಗಳ ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನದಾಸೋಹ, ಪಾನಕ, ಮಜ್ಜಿಗೆ ವಿತರಿಸಲಾಯಿತು.

ADVERTISEMENT

ರಾಮಗೊಂಡನಹಳ್ಳಿ ಗ್ರಾಮದ ಮುಖಂಡ ವೇಣುಗೋಪಾಲ್ ಮಾತನಾಡಿ, ‘ರಾಮಗೊಂಡನಹಳ್ಳಿ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನೆಲೆಗೊಂಡಿರುವ ಶ್ರೀತಿರುಮಲ ಕ್ಷೇತ್ರದ (ಶ್ರೀತಿರುಮಲಸ್ವಾಮಿ) ವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಆಚರಿಸಿಕೊಂಡು ಬರಲಾಗುತ್ತದೆ. ರಾತ್ರಿ ದ್ರೌಪದಮ್ಮ ಧರ್ಮರಾಯ ಸ್ವಾಮಿ ಹೂವಿನ ಕರಗ ನಡೆಯುತ್ತದೆ’ ಎಂದರು.

ರಥೋತ್ಸವದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಮುಳಬಾಗಿಲು ಶಾಸಕ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್, ಮುಖಂಡರಾದ ವೇಣುಗೋಪಾಲ್, ನಲ್ಲೂರಹಳ್ಳಿ ನಾಗೇಶ್, ಉದಯ ಕುಮಾರ್, ಮನೋಹರ ರೆಡ್ಡಿ, ಜಯರಾಮ್ ರೆಡ್ಡಿ, ರಾಜೇಶ್, ಬೆಳತೂರು ರಮೇಶ್, ಗುಂಜೂರು ರಾಮಕೃಷ್ಣಪ್ಪ, ಎನ್.ಎ.ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.