
ಯುಪಿಐ
ಬೆಂಗಳೂರು: ರೋಗಿಗಳ ಅನುಕೂಲಕ್ಕಾಗಿ ಅಳವಡಿಸಿದ್ದ ಯುಪಿಐ ಸ್ಕ್ಯಾನರ್ ತೆಗೆದು ವೈಯಕ್ತಿಕ ಯುಪಿಐ ಸ್ಕ್ಯಾನರ್ ಅಳವಡಿಸಿಕೊಂಡು ₹23 ಲಕ್ಷ ವಂಚಿಸಿದ್ದ ವಿಕ್ಟೋರಿಯಾ ಆಸ್ಪತ್ರೆಯ ಎಂಟು ಸಿಬ್ಬಂದಿಯ ವಿರುದ್ಧ ವಿಶ್ವೇಶ್ವರಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಪ್ರೀತಿ, ಎಸ್.ಪುನೀತಾ, ಸಲ್ಮಾ, ಸತ್ಯಾ, ಶಶಿಕಲಾ, ಲಕ್ಷ್ಮಿಕಾಂತಮ್ಮ, ದರ್ಶನ್ ಹಾಗೂ ಮಹೇಂದ್ರ ಅವರ ವಿರುದ್ಧ ವಂಚನೆ ಆರೋಪದ ಅಡಿ ಪ್ರಕರಣ ದಾಖಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಸ್.ದೀಪಕ್ ಅವರು ಜಯಲಕ್ಷ್ಮಿ ಅವರ ಮೂಲಕ ದೂರು ನೀಡಿದ್ದರು. ಆ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಆಸ್ಪತ್ರೆಯ ಇನ್ಫೊಸಿಸ್ ಲ್ಯಾಬ್ ಬಿಲ್ಲಿಂಗ್ ಕೌಂಟರ್‌ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಎಂಟು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ರಕ್ತ ಪರೀಕ್ಷೆಗೆ ಬರುವ ರೋಗಿಗಳು ಕೌಂಟರ್‌ನಲ್ಲಿ ನೀಡುತ್ತಿದ್ದ ಹಣವನ್ನು ಸರ್ಕಾರದ ಖಾತೆಗೆ ಜಮೆ ಮಾಡದೇ ಸ್ವಂತಕ್ಕೆ ಬಳಸಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಹೇಗೆ ವಂಚನೆ?
ಆಸ್ಪತ್ರೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಯುಪಿಐ ಸ್ಕ್ಯಾನರ್ ಅಳವಡಿಸಲಾಗಿತ್ತು. ಆದರೆ, ಆಸ್ಪತ್ರೆ ಸಿಬ್ಬಂದಿ ವೈಯಕ್ತಿಕ ಕ್ಯೂಆರ್ ಕೋಡ್ ಸ್ಕ್ಯಾನರ್ ಅಳವಡಿಸಿ ತಮ್ಮ ಖಾತೆಗೆ ರೋಗಿಗಳ ಹಣವನ್ನು ಹಾಕಿಸಿಕೊಂಡಿದ್ದರು. ಪ್ರಯೋಗಾಲಯ, ಹೊರ ರೋಗಿಗಳ ವಿಭಾಗ, ಎಕ್ಸ್ರೇ ವಿಭಾಗದಲ್ಲಿ ಈ ರೀತಿಯ ಕೃತ್ಯ ಎಸಗಿ ₹23 ಲಕ್ಷ ಹಣ ದೋಚಿದ್ದಾರೆ. ಬಳಿಕ, ಯುಪಿಐ ಸ್ಕ್ಯಾನರ್ ವಿಚಾರದಲ್ಲಿ ಅನುಮಾನ ಬಂದಿದ್ದರಿಂದ ದೀಪಕ್ ಅವರು ಸಮಿತಿ ರಚಿಸಿ ತನಿಖೆ ನಡೆಸಿದಾಗ ಸಿಬ್ಬಂದಿಯ ಕೃತ್ಯ ಬಯಲಾಗಿತ್ತು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.