ADVERTISEMENT

ಪ್ರೇಮಿಗಳ ಖಾಸಗಿ ಕ್ಷಣದ ವಿಡಿಯೊ ಚಿತ್ರೀಕರಿಸಿ ₹ 25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 4:47 IST
Last Updated 19 ಜುಲೈ 2022, 4:47 IST
   

ಬೆಂಗಳೂರು: ಪ್ರೇಮಿಗಳ ಖಾಸಗಿ ಕ್ಷಣದ ವಿಡಿಯೊ ಚಿತ್ರೀಕರಿಸಿ, ₹ 25 ಲಕ್ಷಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸಹಕಾರ ನಗರದ ನಿವಾಸಿ ಉಷಾ ಹಾಗೂ ದ್ವಾರಕನಗರದ ಸುರೇಶ್ ಬಾಬು ಬಂಧಿತರು. ಪ್ರೇಮಿಗಳು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಕೊಠಡಿಯಲ್ಲಿ ಕ್ಯಾಮೆರಾ ಇರಿಸಿ ಚಿತ್ರೀಕರಣ: ‘ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಯಲಹಂಕ ಬಳಿಯ ಹೋಟೆಲ್‌ವೊಂದರ ಕೊಠಡಿಗೆ ಹಲವು ಬಾರಿ ಹೋಗಿ ಬಂದಿದ್ದರು. ಈ ವಿಷಯ ತಿಳಿದುಕೊಂಡಿದ್ದ ಆರೋಪಿಗಳು, ಪ್ರೇಮಿಗಳ ವಿಡಿಯೊ ಚಿತ್ರೀಕರಣ ಮಾಡಿ ಬ್ಲ್ಯಾಕ್‌ಮೇಲ್ ಮಾಡಲು ಸಂಚು ರೂಪಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಪ್ರೇಮಿಗಳು ಇತ್ತೀಚೆಗೆ ‍ಪುನಃ ಹೋಟೆಲ್‌ ಕೊಠಡಿಗೆ ಹೋಗಿ ಉಳಿದುಕೊಂಡಿದ್ದರು. ಅದೇ ಕೊಠಡಿಯಲ್ಲೇ ರಹಸ್ಯ ಕ್ಯಾಮೆರಾ ಅಳವಡಿಸಿದ್ದ ಆರೋಪಿಗಳು, ಪ್ರೇಮಿಗಳ ಖಾಸಗಿ ಕ್ಷಣಗಳ ವಿಡಿಯೊ ಚಿತ್ರೀಕರಣ ಮಾಡಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ಕೆಲ ದಿನ ಬಿಟ್ಟು ಪ್ರೇಮಿಗಳ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಳುಹಿಸಿದ್ದ ಆರೋಪಿ ಉಷಾ, ‘ನಿಮ್ಮಿಬ್ಬರ ಖಾಸಗಿ ವಿಡಿಯೊ ನನ್ನ ಬಳಿ ಇದೆ. ₹ 25 ಲಕ್ಷ ನೀಡಬೇಕು. ಇಲ್ಲದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದಿದ್ದರು. ಇದರಿಂದ ನೊಂದ ಪ್ರೇಮಿಗಳು, ಕುಟುಂಬದವರಿಗೆ ಮಾಹಿತಿ ನೀಡಿ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.